ಉದಯ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ನಯನತಾರ'ದಲ್ಲಿ ನಾಯಕ ರಾಹುಲ್ ಆಗಿ ನಟಿಸುವ ಮೂಲಕ ಕಿರುತೆರೆ ಜಗತ್ತಿನಲ್ಲಿ ಹೆಸರು ಮಾಡಿದ ಹ್ಯಾಂಡ್ಸಮ್ ಹುಡುಗನ ಹೆಸರು ಧನುಷ್. ಮೊದಲಿನಿಂದಲೂ ನಟನಾಗಿ ಮಿಂಚಬೇಕು, ಅದರಲ್ಲೂ ಸಿನಿರಂಗದಲ್ಲಿ ಮೋಡಿ ಮಾಡಬೇಕು ಎಂಬ ಕನಸು ಹೊಂದಿದ್ದ ಇವರು ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.
"ನಯನತಾರ ಧಾರಾವಾಹಿಯಲ್ಲಿ ನಾನು ರಾಹುಲ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಾಯಕ ರಾಹುಲ್ಗೆ ಚಿಕ್ಕಮ್ಮನೇ ಎಲ್ಲ. ಎಷ್ಟೆಂದರೆ ಆತನ ಅಮ್ಮ ಅಪ್ಪನಿಗಿಂತಲೂ ಬಾಲ್ಯದಿಂದಲೂ ತನ್ನನ್ನು ಸಾಕಿ ಬೆಳೆಸಿದ ಚಿಕ್ಕಮ್ಮ ಎಂದರೆ ಸರ್ವಸ್ವ. ಅವರ ಆಣತಿಯಿಲ್ಲದೇ ನಾನು ಯಾವ ಕೆಲಸವನ್ನು ಕೂಡಾ ಮಾಡುವುದಿಲ್ಲ" ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾರೆ ಧನುಷ್.
"ಎಳವೆಯಿಂದಲೂ ನನಗಿದ್ದಿದ್ದು ಒಂದೇ ಆಸೆ. ಅದು ನಟನಾಗಬೇಕು ಎಂಬುದು. ಅದರ ಹೊರತಾಗಿ ಬೇರೆ ಯಾವ ಆಸೆಯೂ ನನಗಿರಲಿಲ್ಲ. ಮಾತ್ರವಲ್ಲ ಬೇರಾವ ಕನಸನ್ನು ನಾನು ಕಟ್ಟಿಕೊಂಡಿರಲಿಲ್ಲ. ಜೊತೆಗೆ ನಾನು ಅಷ್ಟೊಂದು ವಿದ್ಯಾಭ್ಯಾಸವನ್ನು ಪೂರ್ತಿ ಮಾಡಲಿಲ್ಲ. ಒಂದು ವೇಳೆ ನಾನು ಇಂದು ನಟನಾಗಲಿಲ್ಲ ಎಂದಿದ್ದರೆ ಬಹುಶಃ ನಾನು ಖಿನ್ನತೆಗೆ ಜಾರುತ್ತಿದ್ದೆ" ಎಂದು ಅವರು ಹೇಳುತ್ತಾರೆ.
"ನಟನಾಗಬೇಕು ಎಂಬ ಕನಸು ಕಂಡ ನಂತರ ಅದನ್ನು ನನಸು ಮಾಡುವುದಕ್ಕೆ ಬೇಕಾದ ತಾಲೀಮು ನಡೆಸಲು ತಯಾರು ಮಾಡಿಕೊಂಡೆ. ಅಭಿನಯ ಕಲಿಯುವುದಕ್ಕಾಗಿ ತರಬೇತಿ ಶಾಲೆಗೆ ಸೇರಿದ ನಾನು ನಟನೆಯ ರೀತಿ ನೀತಿಗಳು, ಆಗುಹೋಗುಗಳ ಬಗ್ಗೆ ತಿಳಿದುಕೊಂಡೆ. ಅಲ್ಲಿ ಮೂಕಾಭಿನಯ, ಸಂಭಾಷಣೆ ಜೊತೆಗೆ ಬಹು ಮುಖ್ಯವಾಗಿ ಕ್ಯಾಮೆರಾ ಎದುರಿಸುವುದು ಹೇಗೆ ಎಂಬುದನ್ನು ಕಲಿತುಕೊಂಡೆ. ಆದರೆ ನಿಜವಾದ ಪರೀಕ್ಷೆ ಎದುರಾಗುವುದು ತೆರೆಯ ಮೇಲೆ ಕಾಣಿಸಿಕೊಂಡ ಬಳಿಕವೇ" ಎಂದು ಧನುಷ್ ಅನುಭವ.
ಸದ್ಯ ರಾಹುಲ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಧನುಷ್ ಅವರಿಗೆ ಪೂರ್ಣ ಪ್ರಮಾಣದ ನಟನಾಗಿ ಕಾಣಿಸಿಕೊಳ್ಳುವ ಮಹದಾಸೆ ಇದೆ. ಉತ್ತಮ ಅವಕಾಶ, ಪ್ರಧಾನ ಪಾತ್ರ ದೊರೆತರೆ ಸಿನಿಮಾದಲ್ಲಿ ನಟಿಸಲು ಅವರು ತಯಾರಿದ್ದಾರೆ.