ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಏನಾಗ್ತಾರೆ ಅನ್ನೋದನ್ನು ಊಹಿಸಿ ಹೇಳೋಕಾಗಲ್ಲ. ಈ ಮಾತಿಗೆ ಪೂರಕವಾಗಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಹಾಸ್ಯನಟನಾಗಿರೋ ಧರ್ಮಣ್ಣ ಸಾಕ್ಷಿ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಈ ಕಲಾವಿದ ಬಣ್ಣದ ಲೋಕಕ್ಕೆ ಬಂದಿದ್ದು ಒಂದು ರೋಚಕ ಕಹಾನಿ. ಕೃಷಿ ಕುಟುಂಬದ ಪ್ರತಿಭೆ, ಮುಂದೊಂದು ದಿನ ತಾನು ನಟನಾಗುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್‍ಕುಮಾರ್, ದರ್ಶನ್, ಗಣೇಶ್, ಪ್ರಜ್ವಲ್ ದೇವರಾಜ್, ನಿಖಿಲ್ ಕುಮಾರಸ್ವಾಮಿ.. ಹೀಗೆ ಹಲವು ನಟರ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಇವರು, ಕಾಲೇಜು ದಿನಗಳಲ್ಲಿ ಪಿ.ಲಂಕೇಶ್ ಅವರ ತೆರೆಗಳು, ಕುವೆಂಪು ಅವರ ಕಲ್ಕಿ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾ ಸಿನಿಮಾ ಗೀಳು ಹಚ್ಚಿಕೊಂಡರಂತೆ. ಅಂದು ಪ್ರಾರಂಭವಾದ ಈ ಅಭಿನಯದ ಪಯಣ ಇಂದು ಸಿನಿಮಾಗೆ ಬರುವಂತೆ ಮಾಡಿತು.
ಅಭಿನಯಾಸಕ್ತಿಯ ಜತೆಗೆ ಓದಿನ ಕಡೆಗೂ ಇವರಿಗೆ ಒಲವಿತ್ತು. ಆದ್ರೆ, ಹಣದ ಕೊರತೆಯಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಟೆಲಿಫೋನ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಇದಾದ ನಂತರ ಯಶವಂತ್ ಸರ್ದೇಶಪಾಂಡೆ ಅವರ ನಾಟಕ ತಂಡದಲ್ಲಿ ಟೆಕ್ನಿಶಿಯನ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇಲ್ಲಿ ಲೈಟ್ಬಾಯ್ ಆಗಿ ಕೆಲಸ ಮಾಡುತ್ತಿದ್ದ ಧರ್ಮಣ್ಣ, ಚಿಕ್ಕ ಪಾತ್ರಗಳ ಮೂಲಕ ಕಲಾವಿದನ ಪಟ್ಟ ಅಲಂಕರಿಸುತ್ತಾರೆ. ಇಲ್ಲಿಂದಲೇ ಧರ್ಮಣ್ಣನ ಅದೃಷ್ಟ ಖುಲಾಯಿಸುತ್ತೆ. ರಾಷ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡ ಹಲವು ನಾಟಕಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಾರೆ.
ನಾಟಕಗಳಲ್ಲಿ ಬ್ಯುಸಿಯಾಗಿದ್ದ ಧರ್ಮಣ್ಣ, 'ರಾಮಾ ರಾಮಾ ರೇ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರದ ಮೊದಲ ದೃಶ್ಯಕ್ಕೆ ಸಾಕಷ್ಟು ಟೇಕ್ ತೆಗೆದುಕೊಂಡ ಧರ್ಮಣ್ಣಗೆ ನಿರ್ದೇಶಕ ಸತ್ಯ ಪ್ರಕಾಶ್ ಬಹಳ ತಾಳ್ಮೆಯಿಂದ ನಟನೆ ಹೇಳಿ ಕೊಟ್ಟು, ಧೈರ್ಯ ತುಂಬಿದರಂತೆ.
'ರಾಮಾ ರಾಮಾ ರೇ' ಸಿನಿಮಾ ನಂತ್ರ ಇವರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ 'ಮ್ಯಾನ್ ಆಫ್ ದಿ ಮ್ಯಾಚ್' , 'ಶುಗರ್ ಲೆಸ್' , 'ಬೈ ಟೂ ಲವ್' , 'ಐ ಯಾಮ್ ಪ್ರಗ್ನೆಂಟ್' , 'ಹ್ಯಾಪಿಲಿ ಮ್ಯಾರೀಡ್' ಸಿನಿಮಾಗಳು ಬಿಡುಗಡೆ ರೆಡಿಯಾಗಿವೆ. ಇನ್ನು 'ಕ್ರಾಂತಿ ಅಮರ ಪ್ರೇಮಿ ಅರುಣ್' , 'ತ್ರೀವೆದಂ' , 'ಯದುವೀರ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಧರ್ಮಣ್ಣ ಬ್ಯುಸಿಯಾಗಿದ್ದಾರೆ. ನಿನ್ನೆ ಹುಟ್ಟು ಹಬ್ಬ ಆಚರಿಸಿಕೊಂಡ ಇವರಿಗೆ ಸ್ನೇಹಿತರು ಹಾಗು ಅಭಿಮಾನಿಗಳು ಶುಭ ಕೋರಿದ್ದಾರೆ.