ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕುಲವಧು’ ಧಾರಾವಾಹಿಯಲ್ಲಿ ಹಿರಿಯ ಸೊಸೆ ‘ಧನ್ಯಾ’ ಪಾತ್ರದಲ್ಲಿ ಅಭಿನಯಿಸಿದ್ದ ಕಿರುತೆರೆ ನಟಿ ದೀಪಿಕಾ ಒಂದಾದ ಮೇಲೊಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಮೋಡಿ ಮಾಡಿದ ಚೆಲುವೆ ದೀಪಿಕಾ ಇದೀಗ ‘ಕೃಷ್ಣಪ್ರಿಯ’ ಆಗಿ ಮನರಂಜನೆ ನೀಡಲು ಮರಳಿ ಬಂದಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಪ್ರಸಾರವಾಗುತ್ತಿದ್ದ ‘ಬೆಸುಗೆ’ ಧಾರಾವಾಹಿಯಲ್ಲಿ ನಾಯಕಿ ಕೃಷ್ಣಪ್ರಿಯ ಆಗಿ ದೀಪಿಕಾ ಅಭಿನಯಿಸುತ್ತಿದ್ದಾರೆ. ಇದು ತೆಲುಗಿನ ‘ಇಟಿಂಕಿ ದೀಪಂ ಇಲ್ಲಾಲು’ ಧಾರಾವಾಹಿಯ ರಿಮೇಕ್ ಆಗಿದ್ದು, ತೆಲುಗು ಧಾರಾವಾಹಿಯಲ್ಲಿಯೂ ನಾಯಕಿಯಾಗಿ ಇವರೇ ನಟಿಸುತ್ತಿದ್ದಾರೆ ಎಂಬುದು ವಿಶೇಷ.
ಕುಲವಧು ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಆರತಿಗೊಬ್ಬ ಕೀರ್ತಿಗೊಬ್ಬ’ ಧಾರಾವಾಹಿಯಲ್ಲಿ ಆರತಿ ಆಗಿ ದೀಪಿಕಾ ನಟಿಸಿದ್ದರು. ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೇವಂತಿ’ ಧಾರಾವಾಹಿಯಲ್ಲಿ ನಾಯಕಿ ಸೇವಂತಿ ಆಗಿ ಅಭಿನಯಿಸುತ್ತಿರುವ ಮುದ್ದು ಮುಖದ ಚೆಲುವೆ ‘ಇಂಟಿಕಿ ದೀಪಂ ಇಲ್ಲಾಲು’ ಮೂಲಕ ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ತುಳು ರಂಗಭೂಮಿಯ ಖ್ಯಾತ ಮೇಕಪ್ ಕಲಾವಿದ ಸುರೇಶ್ ಮಾಸ್ಟರ್ ನಿಧನ
"ತೆಲುಗಿನಲ್ಲಿ ನಾನು ಇದೇ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಮೊದಲ ಬಾರಿ ಪ್ರಮುಖ ಪಾತ್ರ ದೊರೆತಿದೆ. ನಾಯಕಿಯಾಗಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗಿದೆ. ಅಂದಹಾಗೆ ತೆಲುಗು ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತಾಗ ಕೊಂಚ ಭಯವಾಗಿತ್ತು. ಆದರೆ ಇದೀಗ ಜನರ ಪ್ರೋತ್ಸಾಹ ಕಂಡು ಖುಷಿಯಾಯಿತು" ಎನ್ನುತ್ತಾರೆ ದೀಪಿಕಾ.