ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ಶಿವರಾಮ್ ಅವರು ಮನೆಯಲ್ಲಿ ಪೂಜೆ ಮಾಡುವಾಗ ತಲೆ ಸುತ್ತಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಭಾರತಿ ವಿಷ್ಣುವರ್ಧನ್, ದೊಡ್ಡಣ್ಣ ಹಾಗೂ ಗಿರಿಜಾ ಲೋಕೇಶ್ ಆಸ್ಪತ್ರೆಗೆ ಭೇಟಿ ನೀಡಿ ಶಿವರಾಮ್ ಆರೋಗ್ಯ ವಿಚಾರಿಸಿದರು.
ಶಿವರಾಮ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಹಿರಿಯ ನಟ ದೊಡ್ಡಣ್ಣ ಮಾತನಾಡಿದರು. ಶಿವರಾಮ್ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಇವರು ರಾಜ್ ಕುಮಾರ್ ಕಾಲದಿಂದ ಚಿತ್ರರಂಗದಲ್ಲಿದ್ದವರು. ಶಿವರಾಮ್ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರಿಗೆ ಈ ರೀತಿ ಆಗಬಾರದಿತ್ತು. ಅದಷ್ಟು ಬೇಗ ಗುಣಮುಖರಾಗಿ ಬರಲಿ ಅನ್ನೋದೇ ನಮ್ಮೆಲ್ಲರ ಹಾರೈಕೆ ಎಂದರು.
ಶಿವರಾಮ್ ಅವರು ವಿಷ್ಣುವರ್ಧನ್ ಕುಟುಂಬದ ಜೊತೆ ತುಂಬಾ ಒಡನಾಟ ಹೊಂದಿದ್ದು, ವಿಷಯ ತಿಳಿದ ಕೂಡಲೇ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಆಸ್ಪತ್ರೆಗೆ ಆಗಮಿಸಿ ಶಿವರಾಮ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಡಾ.ರಾಜ್ಕುಮಾರ್ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದರು. ಅವರು ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದು ಗಾಬರಿಯಾದೆ. ಶಿವರಾಮ್ ಅವರ ಆರೋಗ್ಯ ಸುಧಾರಣೆಗೆ ಎಲ್ಲರೂ ಪ್ರಾರ್ಥನೆ ಮಾಡೋಣ. ಬೇರೆ ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಆದಷ್ಟು ಬೇಗ ಶಿವರಾಮ್ ಅವರು ಗುಣಮುಖರಾಗಲಿ ಎಂದು ಹೇಳಿದರು.
ನಂತರ ಹಿರಿಯ ನಟಿ ಗಿರಿಜಾ ಲೋಕೇಶ್ ಮಾತನಾಡಿ, ಭೇಟಿ ಮಾಡಿದಾಗ ಕನ್ನಡ ಚಿತ್ರರಂಗದ ಬಗ್ಗೆ ಹೇಳುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಸತ್ಯ ಎಂಬ ಧಾರವಾಹಿಯಲ್ಲಿ ನಾನು ಅವರ ಜೊತೆ ಅಭಿನಯಿಸಿದ್ದೆ. ಈ ವಯಸ್ಸಿನಲ್ಲೂ ಶಿವರಾಮಣ್ಣ ಆ್ಯಕ್ಟಿಂಗ್ ಮಾಡೋದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ಚಿತ್ರರಂಗದಲ್ಲಿ ಯಾರಿಗೆ ಏನೇ ಆದರೂ ಅಲ್ಲಿ ಶಿವರಾಮಣ್ಣ ಇರ್ತಾ ಇದ್ದರು. ಈ ಪರಿಸ್ಥಿಯಲ್ಲಿ ಶಿವರಾಮಣ್ಣ ಅವರನ್ನು ನೋಡಿ ತುಂಬಾ ಬೇಜಾರಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ