1500 ಎಪಿಸೋಡ್ಗಳನ್ನು ಪೂರೈಸಿದ 'ಅಗ್ನಿಸಾಕ್ಷಿ'
1500 ಎಪಿಸೋಡ್ಗೆ ಕಾಲಿಡುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ, ಸನ್ನಿಧಿ, ತನು, ಅಂಜಲಿ, ಮಾಯಾ, ವಾಸುದೇವ ಹೀಗೆ ಪ್ರತಿಯೊಂದು ಪಾತ್ರವೂ ಕೂಡಾ ಜನಪ್ರಿಯ. ಜೊತೆಗೆ ಗುಳಿ ಕನ್ನೆಯ ಚೆಲುವ ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಧಾರಾವಾಹಿಯಿಂದ ಹೊರಬಂದಿದ್ದರೂ ಧಾರಾವಾಹಿ ಯಾವುದೇ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ವಿಜಯ್ ಸೂರ್ಯ ಧಾರಾವಾಹಿ ಬಿಟ್ಟಾಗ ವೀಕ್ಷಕರಲ್ಲಿ ಒಂದು ಸಣ್ಣ ಆತಂಕವಿತ್ತು. ಏಕೆಂದರೆ ಸಿದ್ಧಾರ್ಥ್ ಮತ್ತು ಸನ್ನಿಧಿಯೇ ಅಗ್ನಿಸಾಕ್ಷಿಯ ಮುಖ್ಯ ಆಕರ್ಷಣೆ. ಇದೀಗ ಸಿದ್ಧಾರ್ಥ್ ಧಾರಾವಾಹಿಯಿಂದ ದೂರವಿದ್ದರೂ ಜನ ಅಗ್ನಿಸಾಕ್ಷಿಯನ್ನು ಬಿಟ್ಟಿಲ್ಲ ಎಂಬುದಕ್ಕೆ ಈಗಿನ ಜನಪ್ರಿಯತೆಯೇ ಸಾಕ್ಷಿ.
'ನಂದಿನಿ'ಗೆ 150 ರ ಸಂಭ್ರಮ
ನಂದಿನಿ ಧಾರಾವಾಹಿ ಇದೀಗ ಯಶಸ್ವಿ 150 ಎಪಿಸೋಡ್ಗಳನ್ನು ಪೂರೈಸಿದೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ರಮೇಶ್ ಅರವಿಂದ್ ನಿರ್ಮಾಣ ಮಾಡುತ್ತಿದ್ದು ಇದೇ ಮೊದಲ ಬಾರಿಗೆ ರಮೇಶ್ ಇಂತಹ ಜವಾಬ್ದಾರಿ ಹೊತ್ತಿದ್ದಾರೆ. ನಂದಿನಿ ಯಶಸ್ವಿ 150 ದಿನ ಪೂರೈಸಿದ್ದನ್ನು ಧಾರಾವಾಹಿ ತಂಡ ಅದ್ಧೂರಿಯಾಗಿ ಆಚರಿಸಿದೆ. ಮಾತ್ರವಲ್ಲ ಈ ಸಂಭ್ರಮಕ್ಕೆ ಸಾಕ್ಷಿಯಾಗಿ ಧಾರಾವಾಹಿಯ ತಂಡಕ್ಕೆ ನೆನಪಿನ ಕಾಣಿಕೆ ನೀಡಿದ್ದಾರೆ. ಆ ಮೂಲಕ ತಂಡದವರಿಗೆ ಗೌರವ ಸಮರ್ಪಿಸಲಾಗಿದೆ. ನಿತ್ಯಾರಾಮ್, ವಿನಯ್ ಗೌಡ, ಅನು, ಜಯಶ್ರೀ, ಆರವ್ ಸೂರ್ಯ, ರವಿ ಭಟ್, ರಶ್ಮಿ ಗೌರವ್ ಮುಖ್ಯ ಭೂಮಿಕೆಯಲ್ಲಿರುವ ಈ ಧಾರಾವಾಹಿ ಕೂಡಾ ಕಿರುತೆರೆ ಧಾರಾವಾಹಿ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಅದ್ಧೂರಿ ಸಮಾರಂಭದ ಫೋಟೋಗಳನ್ನು ಸ್ವತಃ ರಮೇಶ್ ಅರವಿಂದ್ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.