ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಜಮಾನಿ' ಧಾರಾವಾಹಿಯಲ್ಲಿ ನಾಯಕಿ ಪುಣ್ಯಳಾಗಿ ಅಭಿನಯಿಸಿದ್ದ ಸನಾತನಿ ಇದೀಗ ಸಿರಿಗನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಿರಿ ಭೋಜನ' ಕಾರ್ಯಕ್ರಮದ ನಿರೂಪಕಿಯಾಗಿ ಮೋಡಿ ಮಾಡುತ್ತಿದ್ದಾರೆ.
ಅಂದಹಾಗೆ, ಸನಾತನಿಗೆ ನಿರೂಪಣೆ ಕ್ಷೇತ್ರವೆನು ಹೊಸದೇನಲ್ಲ. 'ಒಗ್ಗರಣೆ ಡಬ್ಬಿ' ಎನ್ನುವ ಅಡುಗೆ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಸನಾತನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿಚನ್ ದರ್ಬಾರ್'ನ ನಿರೂಪಕಿಯಾಗಿ ಮನೆ ಮಾತಾಗಿದ್ದರು.
'ಯಜಮಾನಿ' ಧಾರಾವಾಹಿಯ ಪುಣ್ಯಳಾಗಿ ಕಿರುತೆರೆಯಲ್ಲಿ ನಟಿಸಿದ್ದ ಸುಂದರಿ ಮುಂದೆ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ನಿರೂಪಣೆ ಕ್ಷೇತ್ರಕ್ಕೆ ಮತ್ತೆ ಮರಳಿದ್ದಾರೆ.
'ಈಶ್ವರ ಅಲ್ಲಾ ನೀನೇ ಎಲ್ಲಾ' ಧಾರಾವಾಹಿಯಲ್ಲಿ ದೇವಿ ಪಾತ್ರ ನಿರ್ವಹಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ ಟಿ.ಎಸ್ ರಂಗ ಅವರ 'ಮೌನ ಕ್ರಾಂತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು.
'ಸಂಗೊಳ್ಳಿ ರಾಯಣ್ಣ' ಧಾರಾವಾಹಿಯಲ್ಲಿ ಸೊಸೆಯ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದರು. 'ಶಿವಲೀಲಾಮೃತ'ದಲ್ಲಿ ಲಕ್ಷ್ಮಿಯ ಪಾತ್ರಕ್ಕೆ ಜೀವ ತುಂಬಿದ ಸನಾತನಿ ತದ ನಂತರ ಮಹೇಶ್ ಸಾರಂಗ್ ಅವರ 'ಇದ್ದರೆ ಇರಬೇಕು ನಿನ್ನಂಗ' ಎನ್ನುವ ಉತ್ತರ ಕರ್ನಾಟಕ ಭಾಷೆಯ ಧಾರಾವಾಹಿಯಲ್ಲಿ ಅಭಿನಯಿಸಿದರು.
'ಗೃಹಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿಯಾಗಿ ಅಭಿನಯಿಸಿದ ಸನಾತನಿಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ನೀಡಿತ್ತು. ಕ್ರೇಜಿ ಕುಟುಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಹಾರಿದ ಸನಾತನಿ ಮೂರು ಕಾಸಿನ ಕುದುರೆ ಚಿತ್ರದಲ್ಲಿಯೂ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.