ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂಘರ್ಷ' ಧಾರಾವಾಹಿಯಲ್ಲಿ ಭೈರಾದೇವಿ ಮಗಳು ಅನಘಾ ಆಗಿ ಅಭಿನಯಿಸುತ್ತಿರುವ ನಟಿ ಹೆಸರು ಲಾವಣ್ಯ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜರಾಣಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಕಾಣಿಸಿಕೊಂಡಿರುವ ಲಾವಣ್ಯ ಅಭಿನಯಕ್ಕೆ ಮನಸೋಲದವರಿಲ್ಲ.

ಲಾವಣ್ಯಗೆ ಬಾಲ್ಯದಿಂದಲೂ ನೃತ್ಯದತ್ತ ಒಲವು. ಕೆಲವೊಂದು ಕಾರ್ಯಕ್ರಮಗಳನ್ನೂ ನೀಡಿರುವ ಲಾವಣ್ಯ ಅಂತಿಮ ವರ್ಷದ ಪದವಿ ಕಲಿಯುತ್ತಿರುವಾಗಲೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. 'ರಾಧಾರಮಣ' ಧಾರಾವಾಹಿಯಲ್ಲಿ ನಟಿಸಿದ ಈಕೆ ನಂತರ ನಟನೆಯಿಂದ ದೂರವಾಗಿ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಆರಂಭಿಸಿದರು. ಕೆಲಸಕ್ಕೆ ಸೇರಿ ಸ್ಪಲ್ಪ ದಿನಗಳ ನಂತರ ರಾಜರಾಣಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆಯಿತು. ಕೆಲಸ ಬಿಡಲು ಮನಸ್ಸು ಇಲ್ಲದಿದ್ದರೂ ಗಟ್ಟಿ ಮನಸ್ಸು ಮಾಡಿ ಕೆಲಸದಿಂದ ದೂರವಾಗಿ ಮತ್ತೆ ಆ್ಯಕ್ಟಿಂಗ್ನತ್ತ ಮುಖ ಮಾಡಿದರು.

ನಟನಾ ಲೋಕ ಬಹಳ ವಿಶೇಷವಾದುದು. ಇಲ್ಲಿ ಪ್ರತಿ ಬಾರಿ ಹೊಸಬರ ಪರಿಚಯವಾಗುತ್ತದೆ. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿಯಬಹುದು. ನಮ್ಮಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರಹಾಕಲು ಇದು ಸೂಕ್ತ ವೇದಿಕೆ. ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಇದನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಲಾವಣ್ಯ. ಅಭಿನಯಿಸಲು ಕಿರುತೆರೆ ಅಥವಾ ಬೆಳ್ಳಿತೆರೆ ಯಾವುದಾದರೂ ಸರಿ. ಒಟ್ಟಿನಲ್ಲಿ ಪಾತ್ರ ಸವಾಲಿನದ್ದಾಗಿರಬೇಕು. ಜೊತೆಗೆ ಕ್ರಿಯೇಟಿವ್ ಆಗಿರಬೇಕು ಎನ್ನುತ್ತಾರೆ ಲಾವಣ್ಯ.