ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ಚಂದ್ರಿಕಾ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಪ್ರಿಯಾಂಕಾ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ವಯಸ್ಸಿಗೂ ಮೀರಿದ ಪಾತ್ರದಲ್ಲಿ ಅಭಿನಯಿಸಿ ಕಿರುತೆರೆ ಪ್ರಿಯರ ಮನದಲ್ಲಿ ಸ್ಥಾನ ಪಡೆದ ಪ್ರಿಯಾಂಕಾ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿಯೂ ಮಿಂಚಿದ್ದರು.
ದೊಡ್ಮನೆಯೊಳಗೆ ಹೋಗಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದ ಪ್ರಿಯಾಂಕಾ ಇದೀಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಹೌದು, ಸ್ವಪ್ನ ಕೃಷ್ಣ ನಿರ್ದೇಶನದ 'ಸತ್ಯ' ಧಾರಾವಾಹಿಯಲ್ಲಿ ಪ್ರಿಯಾಂಕಾ ಶಿವಣ್ಣ ನಟಿಸುತ್ತಿದ್ದಾರೆ. ಅಗ್ನಿಸಾಕ್ಷಿಯ ನಂತರ ಕಿರುತೆರೆಯಿಂದ ವಿರಾಮ ತೆಗೆದುಕೊಂಡಿದ್ದ ಇವರು, ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ಹೆಚ್ಚಾಗಿ ನೆಗೆಟಿವ್ ಪಾತ್ರಗಳನ್ನೇ ಇಷ್ಟಪಡುವ ಪ್ರಿಯಾಂಕಾ 'ಸತ್ಯ'ದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದು ಇನ್ನು ಬಹಿರಂಗವಾಗಿಲ್ಲ. ಪರಿಣಯ, ಅವನು ಮತ್ತು ಶ್ರಾವಣಿ, ಒಂದೂರಲ್ಲಿ ರಾಜ ರಾಣಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಪ್ರಿಯಾಂಕಾಗೆ ಹೆಸರು ತಂದು ಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರ.
ಇನ್ನು ಪವನ್ ನಿರ್ದೇಶನದ 'ಫ್ಯಾಂಟಸಿ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ವಿಶೇಷ ಅಂದ್ರೆ ಖಳನಾಯಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಚಂದ್ರಿಕಾ, ಬೆಳ್ಳಿತೆರೆಯಲ್ಲಿಯೂ ಖಳನಾಯಕಿಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ.