ಶೃತಿ ನಾಯ್ಡು ನಿರ್ಮಾಣದಲ್ಲಿ ರಮೇಶ್ ಇಂದಿರಾ ನಿರ್ದೇಶಿಸಿರುವ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ನವರಸ ನಾಯಕ ಜಗ್ಗೇಶ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
‘ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ, ಮೋಡ ಕಟ್ಟಿತು ಹೇಗೆ‘ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಗೀತೆ ‘ಪ್ರಿಮಿಯರ್ ಪದ್ಮಿನಿ’ ಚಿತ್ರಕ್ಕೆ ಸರಿಯಾಗಿ ಹೊಂದುತ್ತದೆ. ರಮೇಶ್ ಇಂದಿರ ಧಾರಾವಾಹಿಯಲ್ಲಿ ಹೇಗೆ ಕಥೆಯನ್ನು ವಿವರವಾಗಿ ಹೇಳುತ್ತಾ ಹೋಗುತ್ತಾರೋ ಅದೇ ಟೆಕ್ನಿಕ್ಕನ್ನು ಈ ಸಿನಿಮಾದಲ್ಲೂ ಅನುಸರಿಸಿದ್ದಾರೆ.
ವಿನಾಯಕ್ (ಜಗ್ಗೇಶ್) ಹಾಗೂ ಶ್ರುತಿ (ಮಧುಬಾಲ) ಇಬ್ಬರ ದಾಂಪತ್ಯ ಜೀವನ ಶೃತಿ ತಪ್ಪಿದಾಗ ಇಬ್ಬರೂ ಡೈವೋರ್ಸ್ಗೆ ಅರ್ಜಿ ಹಾಕುತ್ತಾರೆ. ಇವರ ಮಗ ಸುಮುಖ (ವಿವೇಕ್ ಸಿಂಹ) ಅಪ್ಪ-ಅಮ್ಮನ ಆರೈಕೆ ಇಲ್ಲದೆ ಹೇಗೋ ಬೆಳೆದು ದೊಡ್ಡವನಾಗಿ ತನ್ನ ಬದುಕು ಕಟ್ಟಿಕೊಳ್ಳುತ್ತಾನೆ. ವಿನಾಯಕನ ಕಾರ್ ಡ್ರೈವರ್ ಆಗಿ ಬರುವ ನಂಜುಂಡಿ (ಪ್ರಮೋದ್) ವಿನಾಯಕನ ಜೀವನದಲ್ಲಿ ಬದಲಾವಣೆ ತರುತ್ತಾನೆ. ವಿನಾಯಕನಿಗೆ ಸ್ಪಂದನ (ಸುಧಾರಾಣಿ) ಜೊತೆ ಅಫೇರ್ ಇರುವ ಬಗ್ಗೆ ತಿಳಿದ ನಂಜುಂಡಿ ಗಲಿಬಿಲಿಗೊಳ್ಳುತ್ತಾನೆ.
ಇತ್ತ ವಿನಾಯಕನ ಜೊತೆ ಡೈವೋರ್ಸ್ ಪಡೆದ ಶ್ರುತಿ ರಾಜೇಶ್ (ರಮೇಶ್ ಇಂದಿರ) ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವುದನ್ನು ರಾಜೇಶ್ ಪುತ್ರಿ ರಂಜಿನಿ ( ಹಿತ ಚಂದ್ರಶೇಖರ್) ನಿರಾಕರಿಸುತ್ತಾಳೆ. ಈ ಮಧ್ಯೆ ಸುಮುಖ ಹಾಗೂ ರಂಜಿನಿ ನಡುವೆ ಸ್ನೇಹ ಬೆಳೆಯುತ್ತದೆ. ಇವರ ಸ್ನೇಹವನ್ನು ಪ್ರೀತಿ ಎಂದು ತಪ್ಪಾಗಿ ತಿಳಿದ ಶ್ರುತಿ, ರಂಜಿನಿ ನಿನ್ನ ತಂಗಿ ಇದ್ದ ಹಾಗೆ ಎಂದು ಮಗ ಸುಮುಖನ ಬಳಿ ಹೇಳುತ್ತಾಳೆ. ಮುಂದೆ ಚಿತ್ರದ ಕಥೆ ಯಾವ ತಿರುವು ಪಡೆಯುತ್ತದೆ ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.
ಜಗ್ಗೇಶ್ ಸೆಂಟಿಮೆಂಟ್ ದೃಶ್ಯಗಳಲ್ಲಿ ಬಹಳ ಭಾವುಕರಾಗಿ ಅಭಿನಯಿಸಿದ್ದಾರೆ. ಪ್ರಮೋದ್ ಮಾತನಾಡುವ ಶೈಲಿ, ಡ್ಯಾನ್ಸ್ ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರದಲ್ಲಿ ಮಧುಬಾಲ ಅವರಿಗೆ ಒಂದು ಖಡಕ್ ಪಾತ್ರವಿದೆ. ಅಂದಿನ ‘ಅಣ್ಣಯ್ಯ’ ಸಿನಿಮಾದ ಮಧುಬಾಲ ಇಲ್ಲಿಯೂ ಕಾಣಸಿಗುತ್ತಾರೆ. ಸುಧಾರಾಣಿ ಅವರದ್ದೂ ಕೂಡಾ ಒಂದು ಮನಮೋಹಕ ಪಾತ್ರ. ಇನ್ನು ಕಿರುತೆರೆ ನಟ ವಿವೇಕ್ ಸಿಂಹ, ಹೆತ್ತವರ ಮೇಲೆ ಕೋಪ ಮಾಡಿಕೊಳ್ಳುವ ಪಾತ್ರವನ್ನು ಸೊಗಸಾಗಿ ಮಾಡಿದ್ದಾರೆ. ಹಿತ ಚಂದ್ರಶೇಖರ್ ಇಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ. ದತ್ತಣ್ಣ ಅವರ ಚುಟುಕಾದ ಪಾತ್ರಕ್ಕೂ ಪ್ರೇಕ್ಷಕರು ಭೇಷ್ ಹೇಳಿದ್ದಾರೆ. ರಮೇಶ್ ಇಂದಿರ ಮೌನವಾಗೇ ಪಾತ್ರವನ್ನು ನಿಭಾಯಿಸಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಅವರ ಇತರ ಸಿನಿಮಾಗಳಿಗಿಂತ ಹೆಚ್ಚು ಭಿನ್ನವಾಗಿದೆ. ಅದ್ವೈತ ಗುರುಮೂರ್ತಿ ಅವರ ಕ್ಯಾಮರಾ ಕೈಚಳಕ, ಚಿತ್ರದ ಸಂಭಾಷಣೆ, ಸಂಕಲನ, ಒಳಾಂಗಣ ಹಾಗೂ ಹೊರಾಂಗಣ ಚಿತ್ರೀಕರಣ ಚೆನ್ನಾಗಿದೆ. ಒಟ್ಟಿನಲ್ಲಿ ‘ಪ್ರಿಮಿಯರ್ ಪದ್ಮಿನಿ’ ಹಳೆಯ ಗಾಡಿ ರೀತಿಯಲ್ಲಿ ಮೊದಲು ನಿಧಾನಗತಿ ಆದರೂ ಸೆಕೆಂಡ್ ಹಾಫ್ ನಿಮ್ಮ ಮನಸ್ಸನ್ನು ತಟ್ಟದೇ ಇರುವುದಿಲ್ಲ.