ಉಡುಪಿ : ರಾಷ್ಟ್ರ ಪ್ರಶಸ್ತಿ ಪಡೆದ ನಟ ನಿರ್ದೇಶಕರು ಇವರು. ಕಲಿತದ್ದು ಆರನೇ ಕ್ಲಾಸ್ ಆದ್ರೂ ನಾಲ್ಕು ಪುಸ್ತಕ ಬರೆದ ಸಾಹಿತ್ಯ ಪ್ರೇಮಿ. ಆದ್ರೀಗ ತನ್ನೆಲ್ಲ ಬಿರುದು, ಸನ್ಮಾನಗಳನ್ನು ಗೋಡೆಗೆ ನೇತು ಹಾಕಿ, ಬಣ್ಣದ ಬದುಕಿನಿಂದ ದೂರ ಉಳಿದು ಗುಜರಿ ಅಂಗಡಿ ಕೆಲ್ಸ ಮಾಡ್ತಿದ್ದಾರೆ.
ಅಂದಹಾಗೆ ಇವರ ಹೆಸರು ಯಾಕ್ಯೂಬ್ ಖಾದರ್ ಗುಲ್ವಾಡಿ. ಶ್ರೇಷ್ಠ ನಿರ್ದೇಶಕ, ಸಾಹಿತಿ. ಗುಲ್ವಾಡಿ ಟಾಕೀಸ್ ನಿರ್ಮಾಣದ 'ಧರಿಸಬೇಕು ರಿಸರ್ವೇಶನ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ. ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡು, ನೈಜೀರಿಯಾದ ಅಬುಜಾ ಅಂತಾರಾಷ್ಟ್ರೀಯ ಚಲನ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾದ ಟ್ರಿಪಲ್ ತಲಾಖ್ ಚಿತ್ರದ ನಿರ್ಮಾಪಕರು.
ಈ ಹಿಂದೆ ಹೊಟ್ಟೆಪಾಡಿಗಾಗಿ ಗುಜರಿ ಅಂಗಡಿಯಲ್ಲೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಗುಲ್ವಾಡಿ ಅವರು ನಂತರ ಸಾಹಿತ್ಯ ಕ್ಷೇತ್ರದಲ್ಲಿ ಇರುವ ವಿಶೇಷ ಅಭಿರುಚಿಯಿಂದ ನಾಲ್ಕು ಪುಸ್ತಕ ಬರೆದಿದ್ದಾರೆ. ಒಟ್ಟು 17 ದೇಶ ಸುತ್ತಾಡಿದ ಇವರು ಅಮೆರಿಕಾದ ಅಕ್ಕ ಸಮ್ಮೇಳನದಲ್ಲೂ ಪಾಲ್ಗೊಂಡಿದ್ದರು. ಬಳಿಕ ಸಿನಿಮಾದ ಬಗ್ಗೆ ಆಸಕ್ತಿಯಿಂದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಗುಲಾಬಿ ಟಾಕೀಸ್ ಹಾಗೂ ನಿಖಿಲ್ ಮಂಜು ನಿರ್ದೇಶನದ ಹಜ್‌ನಲ್ಲೂ ಕಾಸ್ಟೂಮ್ಸ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಷ್ಟಕಾಮ್ಯ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಯಕ್ಷಗಾನ ಕುರಿತು ಗೆರೆಗಳು ಹಾಗೂ ಸಿಂಧೂರ ಧಾರಾವಾಹಿಯಲ್ಲೂ ಅಭಿನಯಿಸಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು.
ನಂತರ 2017ರಲ್ಲಿ ಇವರು ನಿರ್ಮಿಸಿದ ರಿಸರ್ವೇಶನ್ ಸಿನಿಮಾ ರಾಷ್ಟ್ರೀಯ ಪುರಸ್ಕಾರ ಹಾಗೂ ರಜತ ಕಮಲ ಪ್ರಶಸ್ತಿ ಪಡೆದಿತ್ತು. ಇದರ ಜೊತೆಗೆ ಆಫ್ರಿಕಾದ ನೈಜೀರಿಯಾದಲ್ಲಿ ನಡೆಯುವ ಪ್ರತಿಷ್ಠಿತ 17 ನೇ "ಅಬುಜಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಯಾಕ್ಯೂಬ್ ನಿರ್ದೇಶನದ ಬ್ಯಾರಿ ಭಾಷೆಯ "ಟ್ರಿಪಲ್ ತಲಾಖ್" ಆಯ್ಕೆಯಾದ ಖುಷಿ ಇವರಿಗಿದೆಯಂತೆ. ಕೊರೊನಾ ಸಂಕಷ್ಟದ ಕಾರಣದಿಂದ ಸಾಕಷ್ಟು ಕಷ್ಟ ಮತ್ತು ನಷ್ಟದ ಜೊತೆಗೆ ಮಾನಸಿಕವಾಗಿ ತಲ್ಲಣದಿಂದ ಜೀವನಕ್ಕಾಗಿ ಗುಜರಿ ಅಂಗಡಿ ತೆರೆದಿದ್ದಾರೆ.
ಸದ್ಯ ಗುಜರಿ ಅಂಗಡಿಯಲ್ಲಿ ದುಡಿಯುವ ನಿರ್ದೇಶಕ, ಮೈ ತುಂಬಾ ಕೆಲಸ, ಒಳ್ಳೆಯ ನಿದ್ರೆ, ಸಮಯ ಸಿಕ್ಕಾಗ ಸ್ವಲ್ಪ ಓದು ಇದ್ರಲ್ಲಿ ನೆಮ್ಮದಿ ಇದೆ ಎನ್ನುತ್ತಾರೆ. ಆದ್ರೆ, ಪ್ರತಿಭೆಯೊಂದು ಹೀಗೆ ಗುಜರಿಯಂಗಡಿಯಲ್ಲೇ ವೇದಿಕೆ ಸಿಗದೇ ಕಳೆದು ಹೋಗಬಾರದು. ಆದಷ್ಟು ಬೇಗ ಕಷ್ಟ ದೂರವಾಗಿ ಮತ್ತೆ ಗುಜರಿ ಅಂಗಡಿ ಕೆಲಸದ ಜೊತೆಗೆ ಸಾಹಿತ್ಯ, ಸಿನಿಮಾದಲ್ಲಿ ಗುರುತಿಸುವಂತಾಗಲಿ ಎನ್ನುವುದು ನಮ್ಮ ಹಾರೈಕೆ.