ಅಕ್ಟೋಬರ್ 15 ರಿಂದ ಥಿಯೇಟರ್ಗಳು ತೆರೆಯುತ್ತಿದ್ದು 16 ರಂದು 'ಲವ್ ಮಾಕ್ಟೇಲ್' ರೀ ರಿಲೀಸ್ ಆಗುತ್ತಿದೆ. ಆದರೂ ಜನರು ಸಿನಿಮಾ ನೋಡಲು ಥಿಯೇಟರ್ಗೆ ಬರುವರೋ ಇಲ್ಲವೋ ಎಂ ಬ ಅನುಮಾನ ಕಾಡುತ್ತಿದೆ. ನಿರ್ಮಾಪಕರು ಕೂಡಾ ತಮ್ಮ ಚಿತ್ರಗಳನ್ನು ಥಿಯೇಟರ್ನಲ್ಲಿ ಬಿಡುಗಡೆ ಮಾಡುವುದೋ, ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಮಾಡುವುದೋ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.

ಒಟ್ಟು 45 ಸಿನಿಮಾಗಳು ಬಿಡುಗಡೆಗಾಗಿ ಕಾಯುತ್ತಿವೆ. ಆದರೆ ಈ ಎಲ್ಲಾ ಸಿನಿಮಾಗಳೂ ಥಿಯೇಟರ್ನಲ್ಲಿ ಬಿಡುಗಡೆಯಾವುದು ಡೌಟ್. ವಿಜಯ್ ಸೂರ್ಯ ಅಭಿನಯದ 'ಕದ್ದು ಮುಚ್ಚಿ' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಈ ಚಿತ್ರ 2019 ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಲವ್ಸ್ಟೋರಿ ಹೊಂದಿರುವ ಈ ಚಿತ್ರ ಬಿಡುಗಡೆ ಆದಾಗ ಸಾಧಾರಣ ಯಶಸ್ಸು ಕಂಡಿತ್ತು. ಈಗ ಒಳ್ಳೆ ಮೊತ್ತಕ್ಕೆ ಮಾರಾಟವಾಗಿದೆ ಎಂದು ನಿರ್ಮಾಪಕ ವಿ.ಜಿ. ಮಂಜುನಾಥ್ ತಿಳಿಸಿದ್ದಾರೆ. ಚಿತ್ರದಲ್ಲಿ ಮೇಘಶ್ರೀ ನಾಯಕಿಯಾಗಿ ನಟಿಸಿದ್ದಾರೆ.

ಬೆಂಗಾಳು, ಶಿವಮೊಗ್ಗ, ಕೋಶಾವರ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರೀತಿಯಿಂದ ವಂಚಿತನಾದ ಆಗರ್ಭ ಶ್ರೀಮಂತನ ಮಗ ಸಮಾಜದಲ್ಲಿ ಏನೆಲ್ಲಾ ಪರಿಸ್ಥಿತಿ ಅನುಭವಿಸುತ್ತಾನೆ ಎಂದು ಚಿತ್ರದಲ್ಲಿ ಹೇಳಲಾಗಿದೆ. ಸುಚೇಂದ್ರ ಪ್ರಸಾದ್, ಚಿಕ್ಕಣ್ಣ, ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ವಾಣಿಶ್ರೀ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಎಂ.ಎಸ್. ಕುಮಾರಸ್ವಾಮಿ ಈ ಚಿತ್ರದಲ್ಲಿ ಖಳ ನಟನಾಗಿ ಅಭಿನಯಿಸಿದ್ದಾರೆ.

ವಸಂತ್ ರಾಜ್ ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಸಾಹಿತ್ಯ ಹಾಗೂ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನ, ಕಲೈ ನೃತ್ಯ, ಸಾಹಸ ಥ್ರಿಲ್ಲರ್ ಮಂಜು 'ಕದ್ದು ಮುಚ್ಚಿ' ಚಿತ್ರಕ್ಕಿದೆ.
