ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಡಾ. ಎಲ್ ಮುರುಗನ್ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಅಂಗ ಸಂಸ್ಥೆ ಆಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಇರುವ ಕೆಲ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ಡಾ ಎಲ್ ಮುರುಗನ್ ಅವ್ರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಫಿಲ್ಸ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ನಟ ಶಿವರಾಜ್ ಕುಮಾರ್, ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಸಾ ರಾ ಗೋವಿಂದ್, ಚಿನ್ನೇಗೌಡ ಹಾಗೂ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನವಿಗಳು : 1.ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್ ಮಾತನಾಡಿ, ಇಡೀ ಭಾರತದಲ್ಲಿಯೇ ಹೆಚ್ಚು ಅರಣ್ಯ ಮತ್ತು ಕಾಡು ಪಾಣಿಗಳನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಜೊತೆಗೆ ಕರ್ನಾಟಕದಲ್ಲೇ ಹೆಚ್ಚಿನ ಅರಣ್ಯಾಧಿಕಾರಿಗಳು ಸಹ ಇರುತ್ತಾರೆ.
ಆದ ಕಾರಣ ಅನಿಮಲ್ ವೆಲ್‌ಫೇರ್ ಬೋರ್ಡ್‌ನಿಂದ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕಾದರೆ ಹರಿಯಾಣಕ್ಕೆ ಹೋಗಬೇಕಾಗಿರುವ ಕಾರಣ ನಿರ್ಮಾಪಕರಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ಬೆಂಗಳೂರಿನಲ್ಲಿ ಅನಿಮಲ್ ವೆಲ್‌ಫೇರ್ ಬೋರ್ಡ್ ಸ್ಥಾಪಿಸಿದರೆ ನಿರ್ಮಾಪಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
2. ಬೆಂಗಳೂರಿನಲ್ಲಿ ಹಿಂದಿ ಡಬ್ಬಿಂಗ್ ಚಿತ್ರಗಳ ಸೆನ್ಸಾರ್‌ಗೆ ಅವಕಾಶ : ಪ್ರಸ್ತುತ ಕನ್ನಡ, ತಮಿಳು, ತೆಲುಗು, ಮಲಯಾಳಿ ಚಿತ್ರಗಳು ಬೆಂಗಳೂರಿನಲ್ಲಿ ಸೆನ್ಸಾರ್ ಆಗುತ್ತಿವೆ. ಕನ್ನಡ ಚಲನಚಿತ್ರಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಡಬ್ಬಿಂಗ್ ಆಗುತ್ತಿವೆ. ಹಿಂದಿ ಡಬ್ಬಿಂಗ್ ಚಿತ್ರಗಳನ್ನು ಮುಂಬೈನಲ್ಲಿ ಸೆನ್ಸಾರ್ ಮಾಡಿಸಬೇಕಾಗಿದೆ. ನಿರ್ಮಾಪಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಹಿಂದಿ ಡಬ್ಬಿಂಗ್ ಚಿತ್ರಗಳನ್ನು ಬೆಂಗಳೂರಿನಲ್ಲೇ ಸೆನ್ಸಾರ್ ಮಾಡಿಸಲು ಅವಕಾಶ ಮಾಡಿಕೊಡುವುದು.
3. ದೂರದರ್ಶನದಲ್ಲಿ ಎಲ್ಲಾ ಚಿತ್ರಗಳನ್ನು ಪ್ರಸಾರ ಮಾಡುವ ಬಗ್ಗೆ : ಪ್ರಸ್ತುತ ದೂರದರ್ಶನದಲ್ಲಿ ಪ್ರಶಸ್ತಿ ಚಿತ್ರಗಳನ್ನು ಮಾತ್ರ ಪ್ರಸಾರ ಮಾಡಲು ಅವಕಾಶವಿರುವ ಕಾರಣ ಎಲ್ಲಾ ಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವಂತೆ ಅವಕಾಶ ನೀಡುವುದು. ಇದರಿಂದ ನಿರ್ಮಾಪಕರಿಗೆ ಅನುಕೂಲವಾಗುತ್ತದೆ.
4. ಸಿಬಿಎಫ್‌ಸಿಗೆ ಸ್ಥಳೀಯ ಚಿತ್ರರಂಗದ ಶೇ.70ರಷ್ಟು ಸದಸ್ಯರ ನೇಮಕ : ಪ್ರಸ್ತುತ ಸೆನ್ಸಾರ್ ಮಂಡಳಿಯಲ್ಲಿ ಚಿತ್ರರಂಗಕ್ಕೆ ಸಂಬಂಧಪಡದೇ ಇರುವ ಸದಸ್ಯರೇ ಹೆಚ್ಚಿನದಾಗಿ ಇರುವ ಕಾರಣ ಚಿತ್ರರಂಗಕ್ಕೆ ಸಂಬಂಧಪಟ್ಟ ಶೇ.70ರಷ್ಟು ಸ್ಥಳೀಯ ಸದಸ್ಯರನ್ನು ಸೆನ್ಸಾರ್ ಮಂಡಳಿಗೆ ನೇಮಿಸಿದರೆ ಸಹಾಯವಾಗುತ್ತದೆ.
5. ವರ್ಷಂಪ್ರತಿ ಸುಮಾರು 400-500 ಚಿತ್ರಗಳು ತಯಾರಾಗುತ್ತಿವೆ. ಜೊತೆಗೆ ಕನ್ನಡ ಚಿತ್ರಗಳು ಡಬ್ಬಿಂಗ್ ಆಗುತ್ತಿರುವ ಕಾರಣ ಸೆನ್ಸಾರ್ ಮಂಡಳಿಗೆ ಈಗಿರುವ ಸೆನ್ಸಾರ್ ಅಧಿಕಾರಿ ಚಿತ್ರಗಳನ್ನು ವೀಕ್ಷಿಸಲು ವಿಳಂಬವಾಗುತ್ತಿದೆ. ಆದ ಕಾರಣ ಹೆಚ್ಚುವರಿಯಾಗಿ ಮತ್ತೋರ್ವ ಸೆನ್ಸಾರ್ ಅಧಿಕಾರಿಗಳನ್ನು (ಒಟ್ಟು ಇಬ್ಬರು) ನೇಮಿಸಿದರೆ ನಿರ್ಮಾಪಕರಿಗೆ ಸಹಾಯ ಆಗಲಿದೆ.
6. ಆನ್‌ಲೈನ್‌ನಲ್ಲಿ ಏಕಗವಾಕ್ಷಿ ಪದ್ಧತಿ ಜಾರಿಗೆ ತರುವ ಬಗ್ಗೆ : ನಿರ್ಮಾಪಕರು ಒಂದು ಬಾರಿ ಆನ್‌ಲೈನ್‌ನಲ್ಲಿ ಏಕಗವಾಕ್ಷಿ ಪದ್ಧತಿಯಡಿ ಚಲನಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ಪಡೆದರೆ ರಾಷ್ಟ್ರಾದ್ಯಂತ ಎಲ್ಲಿ ಬೇಕಾದರೂ ಚಿತ್ರದ ಚಿತ್ರೀಕರಣ ನಡೆಸಲು (ದೇವಸ್ಥಾನ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಐತಿಹಾಸಿಕ ಸ್ಥಳಗಳು, ಇತರೆ) ಅವಕಾಶ ಕಲ್ಪಿಸಿಕೊಟ್ಟರೆ ನಿರ್ಮಾಪಕರಿಗೆ ಸಹಾಯವಾಗುತ್ತದೆ ಅಂತಾ ಕೇಂದ್ರ ಸಚಿವ ಡಾ ಎಲ್ ಮುರುಗನ್ ಅವ್ರಿಗೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಎಲ್ ಮುರುಗನ್ ಅವರು, ನಾನು ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತನಾಡಿದ್ದೇನೆ. ನಮ್ಮ ಸರ್ಕಾರ ಚಿತ್ರರಂಗದ ಪರವಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ವೆಬ್ಸೈಟ್ನಲ್ಲಿ ಸಿನಿಮಾ ಶೂಟಿಂಗ್ ಬಗ್ಗೆ ಎಲ್ಲಾ ಮಾಹಿತಿ ಇದೆ.
ವಿದೇಶಗಳಲ್ಲಿ ಚಿತ್ರೀಕರಣ ಮಾಡಲು, ಎನ್‌ಒಸಿ ಪಡೆಯಲು ಸಿಂಗಲ್ ವಿಂಡೋ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದಿ ಭಾಷೆ ಸೆನ್ಸಾರ್ ಕರ್ನಾಟಕದಲ್ಲೇ ಆಗಬೇಕು ಅಂತಾ ಮನವಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಹಾಯ ಆಗೋ ಹಾಗೆ ಸೆನ್ಸಾರ್ ಆಗೋ ಬಗ್ಗೆ ಗಮನ ಹರಿಸುತ್ತೇವೆ.
ಥಿಯೇಟರ್ ಮಾಲೀಕರು ಪ್ರಾಪರ್ಟಿ ಟ್ಯಾಕ್ಸ್ ಕಟ್ಟೋದನ್ನ ರಾಜ್ಯ ಸರ್ಕಾರ ಮನ್ನಾ ಮಾಡಿದೆ. ರಾಜ್ಯ ಸರ್ಕಾರದಿಂದ 120 ಸಿನಿಮಾಗಳಿಗೆ 10 ಲಕ್ಷ ಸಬ್ಸಿಡಿ ಕೊಟ್ಟಿದ್ದಾರೆ. ಕನ್ನಡ ಸಿನಿಮಾಗಳ ಬ್ಯುಸಿನೆಸ್ ಚೆನ್ನಾಗಿ ಆಗೋದಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳುತ್ತೇವೆ. ನಮ್ಮ ಸರ್ಕಾರ ಚಿತ್ರರಂಗದ ಜೊತೆಗಿರುತ್ತೆ ಅಂತಾ ಸಚಿವ ಎಲ್ ಮುರುಗನ್ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.