ಮಂಗಳೂರು: ದೇಶಾದಾದ್ಯಂತ ಲಾಕ್ಡೌನ್ ಎಲ್ಲ ವಿಭಾಗದ ಮೇಲೆ ದುಷ್ಪರಿಣಾಮ ಬೀರಿದೆ. ಅದೇ ರೀತಿಯಲ್ಲಿ ಚಿತ್ರರಂಗದ ಮೇಲೂ ದೊಡ್ಡ ಹೊಡೆತ ಕೊಟ್ಟಿದೆ. ಇದರ ಪರಿಣಾಮ ಕರ್ನಾಟಕದ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಯ ಜನರಿಗೆ ಮನೋರಂಜನೆ ನೀಡುತ್ತಿದ್ದ ತುಳು ಸಿನಿಮಾ ರಂಗ ಈಗ ಬಡವಾಗಿದೆ.
ತುಳು ಸಿನಿಮಾ ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳನ್ನು ನೀಡುವ ಮೂಲಕ ತುಳು ಚಿತ್ರರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸರಾಸರಿ ಎರಡು ಮೂರು ವಾರಕ್ಕೆ ಹೊಸ ಸಿನಿಮಾ ಬಿಡುಗಡೆಯಾಗುವ ಮೂಲಕ ತುಳುಚಿತ್ರರಂಗ ಭರಪೂರ ಮನೋರಂಜನೆಯನ್ನು ನೀಡುತ್ತಿತ್ತು. ಆದರೆ ಲಾಕ್ಡೌನ್ ಬಳಿಕ ಸಿನಿಮಾ ರಂಗ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ.
ತುಳು ಸಿನಿಮಾಗಳು ಹಾಸ್ಯ ಪ್ರಧಾನ ಸಿನಿಮಾಗಳಾಗಿದ್ದು, ನಾಯಕರಿಗಿಂತಲೂ ಹಾಸ್ಯಕಲಾವಿದರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿರುತ್ತಾರೆ. ಹೀಗೆ ಹಾಸ್ಯ ಕಲಾವಿದರು ಸೇರಿದಂತೆ ಸುಮಾರು 100 ಕಲಾವಿದರು, ತಂತ್ರಜ್ಞರು ಸಿನಿಮಾ ರಂಗವನ್ನು ನಂಬಿ ಬದುಕುತ್ತಿದ್ದಾರೆ. ಲಾಕ್ಡೌನ್ ಬಳಿಕ ಸಿನಿಮಾ ಶೂಟಿಂಗ್ ನಿಂತು ಹೋಗಿದೆ, ಹೊಸ ಸಿನಿಮಾ ಬಿಡುಗಡೆ ನಿಂತಿದೆ.
ತುಳು ಭಾಷೆಯಲ್ಲಿ ಮೊದಲ ಬಾರಿಗೆ ನಟಿಸಿದ ಹಿರಿಯ ಚಿತ್ರನಟ ಅನಂತ್ನಾಗ್ ಅಭಿನಯದ ಇಂಗ್ಲಿಷ್ ಎಂಕ್ಲೆಗ್ ಬರ್ಪುಜಿ ಬ್ರೊ ಮಾರ್ಚ್ 20 ಕ್ಕೆ ಬಿಡುಗಡೆ ಯಾಗಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಲಾಕ್ಡೌನ್ ಹೇರಿಕೆಯಾದ ಕಾರಣ ಸಿನಿಮಾ ಬಿಡುಗಡೆ ನಿಂತು ಹೋಗಿದೆ. ಇದರ ಬೆನ್ನಿಗೆ ಬಿಡುಗಡೆಯಾಗಬೇಕಿದ್ದ ರಾಹುಕಾಲ, ಗುಳಿಗಕಾಲ, ಇಲ್ಕೊಕೆಲ್ ಸಿನಿಮಾಗಳು ಬಿಡುಗಡೆಯಾಗದೆ ಬಾಕಿಯುಳಿದಿದೆ. ಈಗಾಗಲೆ ಸಿನಿಮಾ ಶೂಟಿಂಗ್ ಪೂರೈಸಿರುವ ಹಲವು ಸಿನಿಮಾಗಳು ಬಿಡುಗಡೆಗಾಗಿ ಕಾಯುತ್ತಿದೆ.
ಇದರ ಜೊತೆಗೆ 2 ಎಕರೆ ತುಳು ಸಿನಿಮಾ ಬಿಡುಗಡೆಯಾಗಿ 60 ದಿನ ಪೂರೈಸಿ ಯಶಸ್ವಿ ಪ್ರದರ್ಶನ ನಡೆಯುತ್ತಿತ್ತು. ಈ ಸಿನಿಮಾದ ಪ್ರದರ್ಶನವು ಅರ್ಧದಲ್ಲಿಯೇ ನಿಂತು ಹೋಗಿದೆ.
ಸಿನಿಮಾ ಬಿಡುಗಡೆ ಬಳಿಕ ಜನರಿಗೆ ಮನೋರಂಜನೆ ಒದಗಿಸುತ್ತಿದ್ದ ಚಿತ್ರಮಂದಿರಗಳು ಖಾಲಿ ಬಿದ್ದಿದೆ. ತುಳು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು ಸಿನಿಮಾ, ನಾಟಕವನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಲಾಕ್ಡೌನ್ ಬಳಿಕ ಕಲಾವಿದರುಗಳು ಸಂಕಷ್ಟಕ್ಕೊಳಗಾಗಿದ್ದು, ತುಳು ಚಿತ್ರರಂಗದ ನೆರವಿಗೆ ಸರ್ಕಾರ ಮುಂದೆ ಬರಬೇಕಾಗಿದೆ.