ಬೆಂಗಳೂರು: ಕಳೆದ ಬಾರಿ ಏಳು ತಿಂಗಳಾಯಿತು, ಈ ಬಾರಿ ಮತ್ತೆ ಚಿತ್ರ ಮಂದಿರಗಳು ಪ್ರಾರಂಭವಾಗುವುದು ಯಾವಾಗ? ಎಂಬ ಪ್ರಶ್ನೆಗಳು ಸಿನಿಪ್ರಿಯರನ್ನು ಕಾಡುತ್ತಿವೆ.
ಕಳೆದ ವರ್ಷ ಕೊರೊನಾ ಮೊದಲ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‍ಡೌನ್ ಘೋಷಿಸಿತ್ತು. ಪರಿಣಾಮ, ಚಿತ್ರರಂಗ ಹಲವು ತಿಂಗಳುಗಳ ಕಾಲ ಸ್ತಬ್ಧವಾಯಿತು. ಇದಾದ ನಂತರ ಚಿತ್ರಮಂದಿರ ಪ್ರಾರಂಭವಾಗುವುದಕ್ಕೆ ಏಳು ತಿಂಗಳುಗಳೇ ಬೇಕಾಯಿತು. ಅದೂ ಪೂರ್ಣವಲ್ಲ. ಶೇ. 50ರಷ್ಟು ಹಾಜರಾತಿಗೆ ಮಾತ್ರ. ಈಗ ಪುನಃ ಅಂಥದ್ದೊಂದು ಪರಿಸ್ಥಿತಿ ಎದುರಾಗಿದೆ. ಈ ಬಾರಿ ಚಿತ್ರಮಂದಿರಗಳು ಎಷ್ಟು ದಿನಗಳಿಗೆ ಪುನಃ ಪ್ರಾರಂಭವಾಗುತ್ತವೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.
ಇಂದಿನಿಂದ ರಾಜ್ಯದಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಅದಕ್ಕೂ ಮುನ್ನವೇ ಹಲವು ಚಿತ್ರತಂಡಗಳು ಚಿತ್ರ ಪ್ರದರ್ಶನ ಹಿಂಪಡೆಯುವುದಕ್ಕೆ ತೀರ್ಮಾನಿಸಿದ್ದವು. ಏಪ್ರಿಲ್ 09 ರಂದು `ಕೊಡೆಮುರುಗ' ಚಿತ್ರ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಜನ ಬರದ ಹಿನ್ನೆಲೆಯಲ್ಲಿ ಆ ಚಿತ್ರ ತಂಡದವರು ಕಳೆದ ವಾರದಿಂದಲೇ ಚಿತ್ರಪ್ರದರ್ಶನವನ್ನು ನಿಲ್ಲಿಸಿಬಿಟ್ಟರು.
ಕಳೆದ ವಾರ ಅಜಯ್ ರಾವ್ ಅಭಿನಯದ `ಕೃಷ್ಣ ಟಾಕೀಸ್' ಚಿತ್ರ ಬಿಡುಗಡೆಯಾಯಿತು. ಮೂರು ದಿನಗಳ ನಂತರ ಪ್ರೇಕ್ಷಕರ ಅಭಾವ ಗುರುತಿಸಿದ ಚಿತ್ರತಂಡ, ಚಿತ್ರವನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿತು. ಪರಿಸ್ಥಿತಿ ಸರಿ ಹೋದ ಮೇಲೆ ಚಿತ್ರವನ್ನು ಪುನಃ ಅದ್ದೂರಿಯಾಗಿ ಬಿಡುಗಡೆ ಮಾಡುವುದಕ್ಕೆ ಚಿಂತನೆ ನಡೆಸಿದೆ. ಇನ್ನುಳಿದಂತೆ `ಯುವರತ್ನ', `ರಾಬರ್ಟ್' ಮುಂತಾದ ಚಿತ್ರಗಳ ಪ್ರದರ್ಶನವಾಗುತ್ತಿತ್ತು. ಇಂದಿನಿಂದ ಅದೂ ನಿಲ್ಲಲಿದೆ.
ಇಂದಿನಿಂದ ಶುರುವಾದ ಭಾಗಶಃ ಲಾಕ್‍ಡೌನ್ ಮುಗಿಯುವುದು ಯಾವಾಗ? ಎಂಬುದು ಅದು ಯಾರಿಗೂ ಗೊತ್ತಿಲ್ಲ. ಏಕೆಂದರೆ, ಮೇ 04 ರವರೆಗೂ ಈ ರೀತಿಯ ಪರಿಸ್ಥಿತಿ ಇರಲಿದೆ ಎಂದು ಸರ್ಕಾರ ತಿಳಿಸಿದೆ. ಆ ನಂತರ ಮತ್ತೆ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳುವುದು ಕಷ್ಟ. ಆಗ ಪರಿಸ್ಥಿತಿ ಬಿಗಡಾಯಿಸಿದರೆ ಇನ್ನಷ್ಟು ಕಾಲ ಚಿತ್ರಪ್ರದರ್ಶನ ಸ್ಥಗಿತವಾಗುವ ಸಾಧ್ಯತೆ ಇದೆ. ಹಾಗಾಗಿ, ಸದ್ಯಕ್ಕಂತೂ ಯಾವ ಚಿತ್ರತಂಡದವರೂ ಸಹ ಇಂಥದ್ದೇ ದಿನ ಚಿತ್ರ ಬಿಡುಗಡೆ ಮಾಡ್ತೇವೆ ಎಂದು ಹೇಳುವುದಕ್ಕೆ ಹಿಂಜರಿಯುತ್ತಿದ್ದಾರೆ.