'ಸಲಗ' ಚಿತ್ರದ ನಂತರ ದುನಿಯಾ ವಿಜಯ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವುದು ಹಳೆಯ ವಿಚಾರ. ಈ ಚಿತ್ರಕ್ಕೆ ಹೊಸಬರನ್ನು ಕರೆ ತರುವುದಾಗಿ ವಿಜಯ್ ಹೇಳಿದ್ದರು. ಈಗ ಚಿತ್ರದ ನಾಯಕಿಯಾಗಿ ಕನ್ನಡದ ಖ್ಯಾತ ಧಾರಾವಾಹಿಯ ನಾಯಕಿಯನ್ನು ಕರೆ ತರುತ್ತಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಪಾರು'ವಿನ ಮೋಕ್ಷಿತಾ ಪೈ ಅವರನ್ನು ದುನಿಯಾ ವಿಜಯ್ ತಮ್ಮ ಮುಂದಿನ ಸಿನಿಮಾಗೆ ಕರೆತರುತ್ತಿದ್ದಾರೆ. ಡಾ. ರಾಜ್ ಕುಟುಂಬದ ಲಕ್ಕಿ ಗೋಪಾಲ್ ಅವರನ್ನು ಚಿತ್ರದ ಹೀರೋ ಆಗಿ ಈಗಾಗಲೇ ವಿಜಯ್, ಅಭಿಮಾನಿಗಳಿಗೆ ಪರಿಚಯಿಸಿದ್ದರು. ಅವರಿಗೆ ನಾಯಕಿ ಯಾರು ಎಂಬ ಪ್ರಶ್ನೆ ಬಂದಾಗ, ಈ ಪಾತ್ರವನ್ನು ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ವಿಜಯ್ ಅವರಿಗೂ ಸರಿ ಎನಿಸಿದೆ. ಮೋಕ್ಷಿತಾ ಕಿರುತೆರೆ ವೀಕ್ಷಕರಿಗೆ ಪರಿಚಯವಿದ್ದರೂ ಕನ್ನಡ ಚಿತ್ರರಂಗಕ್ಕೆ ಹೊಸ ಪರಿಚಯ. ಇದುವರೆಗೂ ಅವರು ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದ್ದರಿಂದ ಮೋಕ್ಷಿತಾ ಅವರನ್ನು ವಿಜಯ್ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನುಳಿದಂತೆ ಚಿತ್ರದ ಇತರ ಪಾತ್ರಗಳಿಗೆ ಸೂಕ್ತ ಕಲಾವಿದರ ಆಯ್ಕೆ ನಡೆಯುತ್ತಿದ್ದು, ತಂತ್ರಜ್ಞರ ಆಯ್ಕೆ ಪೂರ್ತಿಯಾಗಿದೆ. ಚಿತ್ರಕ್ಕೆ ಚರಣ್ ರಾಜ್ ಮತ್ತು ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದಾರೆ. ಬಾಲು ಶಿವಮೊಗ್ಗ ಛಾಯಾಗ್ರಹಣ ಇದೆ. ಮಾಸ್ತಿ ಮಂಜು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಟೈಟಲ್ ಇನ್ನೂ ಅಂತಿಮವಾಗಬೇಕಿದೆ. ಶೀಘ್ರದಲ್ಲೇ ಈ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.