ಹೈದರಾಬಾದ್: ವಿಜಯ್ ಸೇತುಪತಿ ಇದೀಗ ಮಾಸ್ಟರ್ ಆಗುತ್ತಿದ್ದಾರೆ. ಅಂದರೆ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ವಿದುತಲೈ ಚಿತ್ರದಲ್ಲಿ ನಾಯಕರಾಗಿ ನಟಿಸಲಿದ್ದಾರೆ.
ವಿದುತಲೈ ಎಂದರೆ ಮಾಸ್ಟರ್ ಅಥವಾ ಶಿಕ್ಷಕ ಎಂದರ್ಥ. ಮೂಲ ತಮಿಳಿನ ಈ ಸಿನಿಮಾ ಸೌತ್ ಇಂಡಿಯನ್ ಭಾಷೆಗಳು ಸೇರಿ ಹಿಂದಿಯಲ್ಲಿಯೂ ಬಿಡುಗಡೆ ಆಗಲಿದೆ.
ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿ ಮಾರನ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಪೋಸ್ಟರ್ ಗುರುವಾರ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಲ್ರೆಡ್ ಕುಮಾರ್ ಅವರ ಆರ್ ಎಸ್ ಇಂಫೋಟೈನ್ಮೆಂಟ್ ಪ್ರೊಡಕ್ಷನ್ಸ್ನಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ.
ಅಷ್ಟೇ ಅಲ್ಲದೆ, ಈ ಚಿತ್ರಕ್ಕೆ ಮ್ಯೂಸಿಕ್ ಮ್ಯಾಸ್ಟ್ರೋ ಇಳಯರಾಜ ಸಂಗೀತ ನೀಡಲಿದ್ದು, ವೆಟ್ರಿ ಮಾರನ್ ಮತ್ತು ಇಳಯರಾಜ ಕಾಂಬೋ ಮೊದಲ ಬಾರಿ ಒಂದಾಗುತ್ತಿದೆ.
ವಿದುತಲೈ ಚಿತ್ರದ ಸಂಪೂರ್ಣ ಶೂಟಿಂಗ್ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಅಚ್ಚರಿ ಏನೆಂದರೆ, ಈಗಾಗಲೇ ಲೊಕೇಶನ್ ಅಂತಿಮ ಮಾಡಲಾಗಿದ್ದು, ವಿದ್ಯುತ್ ಮತ್ತು ಫೋನ್ ನೆಟ್ವರ್ಕ್ ಸಂಪರ್ಕ ಇಲ್ಲದ ಕಡೆಗಳಲ್ಲಿ ಇಡೀ ತಂಡ ಕೆಲಸ ಮಾಡಲಿದೆ. ಅಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಜತೆಗೆ ತಂಡ ಕಾಲ ಕಳೆಯಲಿದ್ದಾರೆ.
ಈಗಾಗಲೇ ಅಸುರನ್ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿರುವ ವೆಟ್ರಿ ಮಾರನ್, ಇದೀಗ ವಿದುತಲೈ ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಲಿದ್ದಾರೆ.
ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ವೆಲರಾಜ್ ಛಾಯಾಗ್ರಹಣ, ಆರ್. ರಮರ್ ಸಂಕಲನ, ಪಿಟರ್ ಹೇನ್ ಸಾಹಸ ನಿರ್ದೇಶನ, ಜಾಖಿ ಅವರ ಕಲಾ ನಿರ್ದೇಶನ ಇರಲಿದೆ.