ಮೊದಲ ಚಿತ್ರ ಕೆಜಿಎಫ್ನಲ್ಲಿ ದೊಡ್ಡ ಮಟ್ಟಿಗೆ ಹೆಸರು ಮಾಡಿದ ನಟಿ ಶ್ರೀನಿಧಿ ಇದೀಗ 6 ತಿಂಗಳ ಗ್ಯಾಪ್ ಬಳಿಕ ಮತ್ತೆ ಕೆಜಿಎಫ್ ತಂಡ ಸೇರಿಕೊಂಡಿದ್ದಾರೆ. 'ಕೆಜಿಎಫ್ ಭಾಗ 2' ಚಿತ್ರೀಕರಣ ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಗಿದ್ದು ಈಗ ಶ್ರೀನಿಧಿ ಶೆಟ್ಟಿ ಚಿತ್ರತಂಡ ಸೇರಿಕೊಂಡಿದ್ದಾರೆ.
ಇಂಜಿನಿಯರಿಂಗ್ ಪದವೀಧರೆಯಾದ ಶ್ರೀನಿಧಿ ಮಾಡೆಲಿಂಗ್ನಲ್ಲೂ ಎತ್ತಿದ ಕೈ. ಕೆಜಿಎಫ್ ನಂತರ ಶ್ರೀನಿಧಿಗೆ ಒಳ್ಳೆ ಅವಕಾಶಗಳು ಹುಡುಕಿ ಬರುತ್ತಿದ್ದು ವಿಕ್ರಮ್ ಜೊತೆ 'ಕೋಬ್ರಾ' ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಟೋಬರ್ 21 ಶ್ರೀನಿಧಿ ಹುಟ್ಟಿದ ದಿನ. ಅಕ್ಟೋಬರ್ 23 ರಂದು ಕೆಜಿಎಫ್ - 2 ಬಿಡುಗಡೆ ಆಗಲಿದೆ ಎಂದು ಈ ಮುನ್ನ ಹೇಳಲಾಗಿತ್ತು. ಈ ಸಮಯಕ್ಕಾಗಿ ಕಾಯುತ್ತಿದ್ದ ಶ್ರೀನಿಧಿಗೆ ಈಗ ಬೇಸರವಾಗಿದೆ. ಕೊರೊನಾ ಕಾರಣದಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
'ನಾನು ಕೆಜಿಎಫ್ ತಂಡಕ್ಕೆ ಮರಳಿ ಬಂದಿರುವುದು ಶಾಲೆಗೆ ವಾಪಸ್ ಬಂದಷ್ಟೇ ಸಂತೋಷವಾಗುತ್ತಿದೆ. ಮಾರ್ಚ್ 3 ರಂದು ಕೊನೆಯ ಬಾರಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಪ್ರಶಾಂತ್ ನೀಲ್ ಕರೆ ಮಾಡಿದ್ದರಿಂದ ಈಗ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದೇನೆ' ಎಂದು ಶ್ರೀನಿಧಿ ಹೇಳಿದ್ದಾರೆ. ಭಾಗ 2ರಲ್ಲಿ ಶ್ರೀನಿಧಿ ಪಾತ್ರ ಹೇಗಿರಲಿದೆ ಎಂಬ ವಿಚಾರವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.