ಮೈಸೂರು: ಆಗಸ್ಟ್ 5 ರಿಂದ ಚೆನ್ನೈ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಸ್ಪಿಬಿ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರ ಸಾಧನೆ ಬೆಟ್ಟದಷ್ಟು. ರಾಜ್ಯ, ದೇಶ, ವಿದೇಶಗಳಲ್ಲಿ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದೇ ವರ್ಷ ಫೆಬ್ರವರಿಯಲ್ಲಿ ಈಟಿವಿಗಾಗಿ ಅವರು ನೀಡಿದ ಸಂಗೀತ ಸಂಜೆ ಕಾರ್ಯಕ್ರಮ ಮೈಸೂರಿನಲ್ಲಿ ನೀಡಿದ ಕೊನೆಯ ಕಾರ್ಯಕ್ರಮ ಆಗಿತ್ತು. ನಗರದ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಸ್ವರಾನುಭೂತಿ ಕಾರ್ಯಕ್ರಮದಲ್ಲಿಎಸ್ಪಿಬಿ ಅವರ ಕಂಠಸಿರಿಯಲ್ಲಿ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ, ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು 'ಈ ರೀತಿಯ ಹಾಡುಗಳನ್ನು ಈಟಿವಿಯಲ್ಲಿ ಹಾಡಿದ್ದೆ. ಸಂಗೀತವೆಂಬುದು ಭಗವಂತನಿಗೆ ಹತ್ತಿರವಾದದ್ದು. ಸಂಗೀತವು ಭಗವಂತನನ್ನು ಸೇರುವ ಹಾದಿಯಾಗಿದೆ ಆ ದಾರಿಯಲ್ಲಿ ನೀವೆಲ್ಲರೂ ಇದ್ದೀರ ಎಂದರು. ಜೀವನದ ಬಗ್ಗೆ ಕೂಡಾ ಮಾತನಾಡಿದ ಅವರು, ಜೀವನದ ಕೊನೆಯ ನಿಲ್ದಾಣ ಬಂದಿದೆ ಎಂದು ತಿಳಿದ ಮೇಲೆ ಅಂತವರಿಗೆ ಧೈರ್ಯ ನೀಡಬೇಕು. ಟ್ರೈನ್ ಯಾವಾಗ ಬೇಕಾದರೂ ಬರಬಹುದು ಯಾವಾಗ ಬೇಕಾದರೂ ಹೋಗಬಹುದು ನೋವಿನಲ್ಲಿ ಇರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದೊಂದು ಪುನೀತವಾದ ಕೆಲಸ' ಎಂದು ಮೌಲ್ಯಯುತ ಮಾತುಗಳಾಡಿದ್ದರು.