ಮುದ್ದು ಮುಖದ ನಟಿ ಶುಭಾ ಪೂಂಜಾ ಕನ್ನಡ, ತಮಿಳು, ತುಳು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾಗಿದೆ. ಈಗ ಮೊದಲ ಬಾರಿಗೆ ಅವರು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿರುವ ‘ತ್ರಿದೇವಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಮಂಗಳೂರು ಮೂಲದ ಶುಭಾ ಪೂಂಜಾ ಮೊಗ್ಗಿನ ಮನಸು ಸಿನಿಮಾದಿಂದ ಖ್ಯಾತಿ ಪಡೆದವರು. ಇವರ ಮೊದಲ ಮಲಯಾಳಂ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಬೆಂಗಳೂರು ನಿವಾಸಿ ಅಶ್ವಿನ್ ಮ್ಯಾಥ್ಯೂ. ‘ತ್ರಿದೇವಿ’ ಹೆಸರಿಗೆ ತಕ್ಕಂತೆ ಮೂರು ಪ್ರಮುಖ ನಾಯಕಿಯರು ಈ ಸಿನಿಮಾದಲ್ಲಿದ್ದಾರೆ. ಇದರಲ್ಲಿ ಶುಭಾ ಪೂಂಜಾ, ಸಂಧ್ಯಾ ಹಾಗೂ ಜ್ಯೋತ್ಸ್ನ ರಾವ್ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಕಥಾ ವಸ್ತುವಿರುವ ಈ ಸಿನಿಮಾದಲ್ಲಿ ಸತೀಶ್, ಜಯದೇವ, ಸಂಪತ್ ಖಳ ನಟರುಗಳಾಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ತ್ರಿದೇವಿ ಸಿನಿಮಾದಲ್ಲಿ ಶುಭಾ ಪೂಂಜಾ ಸಿನಿಮಾ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಸಂಧ್ಯಾ ಹಾಗೂ ಜ್ಯೋತ್ಸ್ನ ಬರಹಗಾರರು ಹಾಗೂ ನಿರ್ದೇಶಕರಾಗಿ ನಟಿಸಿದ್ದಾರೆ. ಈ ಸಿನಿಮಾ ಥ್ರಿಲ್ಲರ್ ಅಂಶಗಳನ್ನು ಹೊಂದಿದೆ. ಚಿತ್ರಕ್ಕಾಗಿಯೇ ಶುಭಾ ಪೂಂಜಾ, ಸಂಧ್ಯಾ ಹಾಗೂ ಜ್ಯೋತ್ಸ್ನಾರಾವ್ ಅವರು ಹನ್ನೆರೆಡು ದಿನಗಳ ಕಾಲ ಕಲರಿಪಟು ಕಲೆಯ ತರಬೇತಿ ಪಡೆದುಕೊಂಡಿದ್ದಾರೆ.