ಬೆಂಗಳೂರು: ಉಗ್ರಂ ಸಿನಿಮಾ ಅಂದ್ರೆ ಥಟ್ ಅಂತಾ ನೆನಪಾಗೋದು ಚಿತ್ರದ ಮಾಸ್ ದೃಶ್ಯಗಳು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗೋಕೆ ಇದೆ ಕಾರಣ ಎಂದ್ರೆ ತಪ್ಪಾಗಲ್ಲ. ನಾವು ಈ ಸಿನಿಮಾ ಬಗ್ಗೆ ಹೇಳೋದಕ್ಕೂ ಒಂದು ಕಾರಣ ಇದೆ.
ಹೌದು, ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿರುವ ಶಿವು, ಇದುವರೆಗೂ ಪಂಚ ಭಾಷೆಗಳಲ್ಲಿ 200 ಕ್ಕೂ ಹಚ್ಚು ಚಿತ್ರಗಳಲ್ಲಿ ತಮ್ಮ ಸಾಹಸದ ತಾಕತ್ತು ತೋರಿಸಿದ್ದಾರೆ. ಮೊದಲಿಗೆ ಚಿತ್ರರಂಗದಲ್ಲಿ ಫೈಟರ್ ಆಗಿ ಕೆಲಸ ಶುರು ಮಾಡಿದ್ದ ಶಿವು, ಡಾ ವಿಷ್ಣುವರ್ಧನ, ಸುಹಾಸಿನಿ ಅಭಿನಯದ 1990ರಲ್ಲಿ ತೆರೆ ಕಂಡಿದ್ದ ಮುತ್ತಿನ ಹಾರ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ತಮ್ಮ ಚಮತ್ಕಾರ ತೋರಿರುವ ಶಿವು ಇಂದಿಗೂ ಬಹುಬೇಡಿಕೆಯ ಸ್ಟಂಟ್ ಮಾಸ್ಟರ್ ಆಗಿದ್ದಾರೆ.
ಬೆಂಗಳೂರಿನ ನಾಗ ಸಂದ್ರ ಸರ್ಕಲ್ ಬಳಿ ವಾಸವಾಗಿರುವ ಶಿವು, ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದಾಗಲೇ ಸಾಹಸ ಕಲೆ ಇವರನ್ನು ಕೈ ಬೀಸಿ ಕರೆದಿತ್ತು. ಕೃಷ್ಣ ರಾವ್ ಪಾರ್ಕ್ನಲ್ಲಿ ವ್ಯಾಯಾಮ ಮಾಡುತ್ತ ದೇಹವನ್ನು ಕತ್ತಿಯಂತೆ ಸಾಣೆ ಹಿಡಿದರು. ಹಾಸನ್ ರಘು, ಥ್ರಿಲ್ಲರ್ ಮಂಜುರಂತ ಹಿರಿಯರ ಗರಡಿಯಲ್ಲಿ ಈ ಶಿವು ಪಳಗಿ ಬಂದಿದ್ದಾರೆ. ಕನ್ನಡದ ಎಲ್ಲ ದೊಡ್ಡ ನಾಯಕರುಗಳ ಸಿನಿಮಾಕ್ಕೆ ಶಿವು ಸಾಹಸ ಸಂಯೋಜನೆ ಮಾಡಿದ್ದಾರೆ. ಶಿವು ಈಗ ಭೋಗ್ಯಕ್ಕೆ ಪಡೆದು ವಾಸವಾಗಿದ್ದಾರೆ. ಪರಭಾಷೆಗಳಲ್ಲಿ ಕೆಲಸ ಮಾಡಿದರೆ ಕೈತುಂಬ ಸಂಭಾವನೆ ಪಡೆಯುತ್ತಾರೆ. ಕನ್ನಡದಲ್ಲಿ ದುಡ್ಡು ಕಡಿಮೆ, ವಿಭಿನ್ನ ಸ್ಟಂಟ್ ಮಾಡೋದಕ್ಕೆ ಅವಧಿಯು ಕಡಿಮೆ ಅಂತಾರೆ ಶಿವು. ಮರಾಠಿ ಚಿತ್ರಕ್ಕೆ ದಿನಕ್ಕೆ 50 ಸಾವಿರ ರೂಪಾಯಿ ಸಂಪಾದನೆ ಮಾಡಿದ್ದುಂಟು. ಈಗ ಶಿವು ಕೈಯಲ್ಲಿ 20 ಸಿನಿಮಾಗಳಿವೆ. 20 ಫೈಟರ್ಗಳು ಅವರ ತಂಡದಲ್ಲಿದ್ದು, ‘ಗೋರಿ’ ಚಿತ್ರಕ್ಕೆ ಸ್ಟಂಟ್ ಕಂಪೋಸ್ ಮಾಡಲಿದ್ದಾರೆ.