ಕೊರೊನಾ ಹಾಗೂ ಲಾಕ್ಡೌನ್ನಿಂದ ಕನ್ನಡ ಚಿತ್ರರಂಗ ತತ್ತರಿಸಿ ಹೋಗಿದೆ. ಸಿನಿ ಕಾರ್ಮಿಕರ ಕಷ್ಟಕ್ಕೆ ಈಗಾಗಲೇ ಸಾಕಷ್ಟು ತಾರೆಯರು ಸ್ಪಂದಿಸಿ ಹಸಿವು ನೀಗಿಸುವ ಕೆಲಸ ಮಾಡ್ತಾ ಇದ್ದಾರೆ.
ಕೆಲ ದಿನಗಳಿಂದ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ದಂಪತಿ, ಹಸಿದವರಿಗೆ ಆಸರೆಯಾಗಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಾ ಇದ್ದರು. ಈಗ ಶಿವರಾಜ್ ಕುಮಾರ್ ತಮ್ಮ 35ನೇ ವರ್ಷದ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಕಷ್ಟದಲ್ಲಿರುವ ಚಿತ್ರಮಂದಿರಗಳ ಕಾರ್ಮಿಕರ ನೆರವಿಗೆ ಬಂದಿದ್ದಾರೆ.
ಶಿವಣ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 35 ವಂಸತಗಳನ್ನ ಪೂರೈಸಿದ್ದಾರೆ. ಈ ಸಂಭ್ರಮವನ್ನು ಶಿವಣ್ಣ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ. ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಶಿವಣ್ಣ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಈ ಕೆಲಸವನ್ನು ಶಿವಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಸಂಘದವರ ಸಹಯೋಗದೊಂದಿಗೆ, ನಟ ವಶಿಷ್ಠ ಸಿಂಹ ಹಾಗೂ ನಿರ್ದೇಶಕ ನಂದ ಕಿಶೋರ್ ಮತ್ತು ನಿರ್ಮಾಪಕ ಸುಧೀಂದ್ರ ಆಗಮಿಸಿ ಚಿತ್ರಮಂದಿರದ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸಿದರು. ಕೆಜಿ ರಸ್ತೆಯ 9 ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಸುಮಾರು 120ಕ್ಕೂ ಹೆಚ್ಚು ಕಾರ್ಮಿಕರಿಗೆ, ಗಾಂಧಿನಗರದ ನರ್ತಕಿ ಚಿತ್ರಮಂದಿರದ ಮುಂಭಾಗ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದರು.