1993 ರಲ್ಲಿ ಬಿಡುಗಡೆಯಾಗಿದ್ದ ಉಪೇಂದ್ರ ನಿರ್ದೇಶನದ 'ಶ್' ಸಿನಿಮಾವನ್ನು ಯಾರು ತಾನೇ ಮರೆಯಲು ಸಾಧ್ಯ..? ಏಕೆಂದರೆ ಈ ಚಿತ್ರ ದೊಡ್ಡ ಮಟ್ಟಕ್ಕೆ ಸಂಚಲನ ಹುಟ್ಟು ಹಾಕಿತ್ತು.
ಕುಮಾರ್ ಗೋವಿಂದ್ ಹಾಗೂ ಮೇಘ ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದರು. ಇದೀಗ 'ಶ್' ಭಾಗ 2 ತಯಾರಾಗುತ್ತಿದೆ. ಡಿ.ಪಿ. ಕಂಬೈನ್ಸ್ ಮೂಲಕ ಉದ್ಯಮಿ ಡಿ.ಪಿ. ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚನ್ನಪಟ್ಟಣದ ತಿಟ್ಟಮಾರಹಳ್ಳಿಯ ಮಹೇಶ್. ಪಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಡಿ.ಪಿ.ವೆಂಕಟೇಶ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

'ಶ್ 2' ಚಿತ್ರಕ್ಕೆ ವಿ. ಮನೋಹರ್ ಸಂಗೀತ ನೀಡುತ್ತಿದ್ದಾರೆ. ಜುಲೈ 2 ರಿಂದ ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ಪಾರೇಕ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಆರಂಭವಾಗಿದೆ. ಜುಲೈ 2 ನನ್ನ ಆಪ್ತ ಸ್ನೇಹಿತ ಮಹೇಶ್ ಹುಟ್ಟುಹಬ್ಬ. ಹಾಗಾಗಿ ಅಂದಿನಿಂದ ಚಿತ್ರದ ಹಾಡುಗಳ ಧ್ವನಿಮುದ್ರಣ ಆರಂಭಿಸಿರುವುದಾಗಿ ನಿರ್ಮಾಪಕ - ನಿರ್ದೇಶಕ ಡಿ.ಪಿ. ವೆಂಕಟೇಶ್ ತಿಳಿಸಿದ್ದಾರೆ.
ಕೊರೊನಾ ಹಾವಳಿ ಕಡಿಮೆಯಾದ ನಂತರ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮಡಿಕೇರಿಯಲ್ಲಿ 40 ದಿನಗಳ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಸಾಹಸ ಸಂಯೋಜನೆ ಮಾಡಲಿದ್ದಾರೆ. ಚಿತ್ರದ ನಾಯಕನ ಪಾತ್ರಕ್ಕಾಗಿ ಕನ್ನಡದ ಖ್ಯಾತ ನಟರೊಂದಿಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕಲಾವಿದರ ಹಾಗೂ ಉಳಿದ ತಂತ್ರಜ್ಞರ ಮಾಹಿತಿ ನೀಡುವುದಾಗಿ ಡಿ.ಪಿ. ವೆಂಕಟೇಶ್ ತಿಳಿಸಿದ್ದಾರೆ.