ಸ್ಯಾಂಡಲ್ ವುಡ್ನಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ, ಆಗಾಗ ಹಾರರ್ ಕಮ್ ಥ್ರಿಲ್ಲರ್ ಕಥೆ ಆಧರಿಸಿರೋ ಸಿನಿಮಾಗಳು ಗಮನ ಸೆಳೆಯುತ್ತವೆ. ಇದೀಗ ಮಾಸ್ಟರ್ ಪೀಸ್ ಸಿನಿಮಾ ಬೆಡಗಿ ಶಾನ್ವಿ ಶ್ರೀವಾತ್ಸವ ಅಭಿನಯದ ಹಾಗೂ ಪ್ರಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ 'ಕಸ್ತೂರಿ ಮಹಲ್' ಬಿಡುಗಡೆಯಾಗಲು ಸಿದ್ಧವಾಗಿದೆ.
ಈ ಚಿತ್ರದ ಟೀಸರ್ ಅನ್ನು ಕಳೆದ ವರ್ಷ ಜನವರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಭಾರಿ ಸದ್ದು ಮಾಡಿತ್ತು. ಬಳಿಕ ಆಗಸ್ಟ್ನಲ್ಲಿ ಟ್ರೈಲರ್ ರಿಲೀಸ್ ಆಗಿತ್ತು. 'ಚಂದ್ರಲೇಖ' ಎಂಬ ಹಾರರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಶಾನ್ವಿ ಶ್ರೀವಾತ್ಸವ ಇದೀಗ ಮತ್ತೊಮ್ಮೆ ಹಾರರ್ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ನಿರ್ದೇಶನದ ಜೊತೆಗೆ ಚಿತ್ರಕ್ಕೆ ದಿನೇಶ್ ಬಾಬು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರನ್ನೊಳಗೊಂಡ ತಾರಾಗಣ ಚಿತ್ರದಲ್ಲಿದೆ. ಶ್ರೀ ಭವಾನಿ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸಿರುವ ಈ ಚಿತ್ರಕ್ಕೆ ನವೀನ್ ಆರ್ ಸಿ ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಹರೀಶ್ ಕೃಷ್ಣ ಅವರ ಸಂಕಲನ ಕಸ್ತೂರಿ ಮಹಲ್ಗಿದೆ.
ಇದನ್ನೂ ಓದಿ: ಕಸ್ತೂರಿ ಮಹಲ್ ಟೀಸರ್ ಬಿಡುಗಡೆಗೊಳಿಸಿದ ಪವರ್ ಸ್ಟಾರ್!
ಬಹುತೇಕ ಚಿತ್ರೀಕರಣ ಮುಗಿಸಿರೋ ಕಸ್ತೂರಿ ಮಹಲ್ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಸದ್ಯದಲ್ಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಪ್ರಸ್ತುತ ಚಿತ್ರಮಂದಿರಗಳಿಗೆ ಶೇ.50ರಷ್ಟು ಮಾತ್ರ ಅವಕಾಶವಿದೆ. ಸರ್ಕಾರದ ಮುಂದಿನ ನಿಲುವನ್ನು ನೋಡಿಕೊಂಡು ಬಿಡುಗಡೆಯ ದಿನಾಂಕ ತಿಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಟ್ರೈಲರ್ನಿಂದಲೇ ಭರವಸೆ ಹುಟ್ಟಿಸಿರೋ ಕಸ್ತೂರಿ ಮಹಲ್ ಸಿನಿಮಾ, ಪ್ರೇಕ್ಷಕರನ್ನ ಯಾವ ರೀತಿ ಭಯ ಹುಟ್ಟಿಸಲಿದೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.