ನಟನಾ ಜಗತ್ತೇ ಹಾಗೆ.. ಒಮ್ಮೆ ಸೆಳೆದರೆ ಸಾಕು ಅದರಲ್ಲಿಯೇ ತಲ್ಲೀನ ಮಾಡುವಷ್ಟು ಶಕ್ತಿ ಹೊಂದಿದೆ. ತಮ್ಮ ಬ್ಯಾಂಕ್ ನೌಕರಿಯನ್ನು ಬಿಟ್ಟು ನಟನೆಯತ್ತ ವಾಲಿರುವ ಕೃತಿ ಬೆಟ್ಟದ್ ಅವರ ಕತೆಯೂ ಹಾಗೇ ಇದೆ. ಮೂಲತಃ ಗುಡಿಬಂಡೆಯವರಾದ ಕೃತಿ, ಭವಿಷ್ಯ ಅರಸಿ ಬಂದದ್ದು ಬೆಂಗಳೂರಿಗೆ. ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಬೆಳ್ಳಿ ಪಾತ್ರದ ಮೂಲಕ ಜನಮನ ಗೆದ್ದಿದ್ದಾರೆ.
ಬಾಲ್ಯದಲ್ಲಿಯೇ ಛದ್ಮ ವೇಷದಲ್ಲಿ ಪ್ರಥಮ ಬಹುಮಾನ ಪಡೆದಿದ್ದ ಈಕೆಗೆ ನಾಟಕದಲ್ಲಿ ವಿಶೇಷ ಒಲವು. ಒಂದರ್ಥದಲ್ಲಿ ನಟನೆ ಅವರಿಗೆ ರಕ್ತಗತವಾಗಿ ಬಂದಿದೆ ಎಂದರೆ ಸುಳ್ಳಲ್ಲ. ಯಾಕೆಂದರೆ ಕೃತಿ ಅವರ ಅಪ್ಪ ಅಮ್ಮ ಇಬ್ಬರಿಗೂ ನಾಟಕದಲ್ಲಿ ಬಹಳ ಆಸಕ್ತಿ. ಮೂರನೇ ವಯಸ್ಸಿಗೆ ಅಮ್ಮ ನಿರ್ದೇಶಿಸಿದ್ದ ಒನಕೆ ಓಬವ್ವ ನಾಟಕದಲ್ಲಿ ಓಬವ್ವನಾಗಿ ನಟಿಸಿದ್ದ ಈಕೆಗೆ ಆಗಿನಿಂದಲೇ ನಟನೆ ಗೀಳಾಗಿತ್ತು. ಮತ್ತು ಈಗ ವೃತ್ತಿಯಾಗಿ ಬದಲಾಯಿತು ಎಂದು ನಗುತ್ತಾ ಹೇಳುವ ಕೃತಿ ಅಮ್ಮ- ಅಪ್ಪನ ಎಲ್ಲಾ ನಾಟಕಗಳಲ್ಲೂ ತಪ್ಪದೇ ಬಣ್ಣ ಹಚ್ಚುತ್ತಿದ್ದರಂತೆ. ಕಾಲೇಜು ದಿನಗಳಲ್ಲಿ ಏಕಪಾತ್ರಾಭಿನಯಗಳಲ್ಲಿ ನಟಿಸಿ ಹಲವು ಬಹುಮಾನಗಳನ್ನು ಗೆದ್ದಿರುವ ಕೃತಿ ಇದೀಗ ಅಪ್ಪನ ಕನಸಾದ ಪಾಂಚಜನ್ಯ ಕಲಾ ಬಳಗದ ಮೂಲಕ ಇಂದಿಗೂ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಬಿಬಿಎಂ ಓದುತ್ತಿರುವ ಸಮಯದಲ್ಲಿಯೂ ಒಂದಷ್ಟು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಕೃತಿ ಅವರು ಡಿಗ್ರಿ ಮುಗಿಸಿ ಬ್ಯಾಂಕ್ ಕೆಲಸಕ್ಕೆ ಸೇರಿದರು. ಒಂದಷ್ಟು ದಿನ ಅಲ್ಲಿ ಕೆಲಸ ಮಾಡಿದ ಇವರಿಗೆ ಬಣ್ಣದ ಲೋಕದ ನಂಟು ಬಿಟ್ಟಿರಲು ಸಾಧ್ಯವಾಗಲೇ ಇಲ್ಲ. ಕೆಲಸಕ್ಕೆ ತಿಲಾಂಜಲಿ ಹೇಳಿದ ಆಕೆ ಅಭಿನಯ ತರಂಗ ಸೇರಿ ನಟನೆಯ ರೀತಿ ನೀತಿಗಳನ್ನು ಕಲಿತರು. ಅಲ್ಲಿ ಪಳಗಿದ ಕೃತಿ ಆ ವರ್ಷದ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ರಾಧಾ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಕೃತಿ ಅಲ್ಲಿ ಡಾನ್ ಪಾತ್ರ ನಿರ್ವಹಿಸಿದರು. ಬಳಿಕ ಎ.ಜಿ ಶೇಷಾದ್ರಿ ಅವರ ಕಲ್ಯಾಣ ರೇಖೆ ಧಾರಾವಾಹಿಯಲ್ಲಿ ಮೇನಕ ಪಾತ್ರ ನಿರ್ವಹಿಸಿದರು. ನಂತರ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಕೃತಿ ಅವರಿಗೆ ಬ್ರೇಕ್ ಕೊಟ್ಟಿದ್ದು "ಮಂಗಳಗೌರಿ ಮದುವೆ. ಮಂಗಳ ಗೌರಿ ಮದುವೆಯಲ್ಲಿ ವಿಲನ್ ಸೌಂದರ್ಯ ತಂಗಿ ಬೆಳ್ಳಿ ಎಂಬ ಹೆಸರಿನ ಪಾತ್ರದಲ್ಲಿ ನಟಿಸುತ್ತಿರುವ ಕೃತಿಯ ಮನೋಜ್ಞ ಅಭಿನಯಕ್ಕೆ ಮಾರು ಹೋಗದವರಿಲ್ಲ. ಅವರ ಪಾತ್ರ ಅದೆಷ್ಟು ಮೋಡಿ ಮಾಡಿದೆ ಎಂದರೆ ಎರಡು ವರುಷದ ಮಗುವಿನಿಂದ ಹಿಡಿದು ಅರವತ್ತು ವರುಷದ ಹಿರಿಯರೂ ಇಂದು ಕೃತಿ ಅವರನ್ನು ಗುರುತಿಸುತ್ತಾರೆ.
ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ನಟನಾ ಛಾಪು ಮೂಡಿಸಿರುವ ಕೃತಿ ಮೈಲಾರಿ. ಡೆಡ್ಲಿ-2 ,ಝೂಮ್ , ಕೂಲ್, ಡ್ರಾಮಾ, ವಿಕ್ಟರಿ -2, ಉತ್ಸಾಹಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಭಜೋ ಬಿ ಕರ್ ವಾಲೇ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗು ಸಿನಿಮಾದಲ್ಲಿಯೂ ನಟಿಸಿರುವ ಈಕೆ ಪರಭಾಷೆಯ ಬಣ್ಣದ ಲೋಕದಲ್ಲಿ ನಟನಾ ಕಂಪನ್ನು ಪಸರಿಸಿದ್ದಾರೆ.
ಇದಲ್ಲದೇ ನಿರ್ದೇಶಕ ಶಶಾಂಕ್ ಅವರು ಸನ್ ಫ್ಲವರ್ ಆಯಿಲ್ ಜಾಹೀರಾತಿನಲ್ಲಿ ನಟಿಸಲು ಅವಕಾಶ ನೀಡಿದ್ದರು ಎನ್ನುವ ಕೃತಿ ಹಿಂದಿ ಧಾರಾವಾಹಿಯೊಂದಕ್ಕೆ ಸಹ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಕನಸಿದೆ ಎನ್ನುವ ಕೃತಿ ಅವರು ಸೇತುರಾಂ ಬರೆದಿರುವ ಕಾತ್ಯಾಯಿನಿ ನಾಟಕದಲ್ಲಿ ನಾಗೇಂದ್ರ ಶಾ ಅವರ ಜೊತೆ ಅಭಿನಯಿಸಿದ್ದಾರೆ.
ಇದಲ್ಲದೇ ದಪ್ಪಗೆ ಇರೋರೆಲ್ಲ ಸೇರಿ ಮಾಡಿರುವ ಬಿಗ್ ಫ್ಯಾಟ್ ಕಂಪನಿಯಿಂದ ಹಯವದನವನ್ನು ಬೇಸ್ ಆಗಿಟ್ಟುಕೊಂಡು "ಹೆಡ್ ಟು ಹೆಡ್ "ಎಂಬ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಇದರಲ್ಲಿ ನಟಿಸಿರುವ ಈಕೆ ಸಂಗೀತ ಸಹ ನೀಡಿದ್ದಾರಂತೆ. ಅಭಿನಯ ಕೇವಲ ಹವ್ಯಾಸ ಆಗಿ ಉಳಿಯದೇ ವೃತ್ತಿ ಆಗಿದೆ. ಪ್ರತಿಭೆಯನ್ನು ಹೊರತೆಗೆಯೋ ಅವಕಾಶ ಆಗಿದೆ ಎನ್ನುತ್ತಾರೆ ಕೃತಿ.