ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವರು' ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅನಿಲ್ ರಾವಿಪುಡಿ ನಿರ್ದೇಶನದ ಈ ಸಿನಿಮಾ ಮಹೇಶ್ ಬಾಬು ಅಭಿನಯದ 26ನೇ ಸಿನಿಮಾ.
'ಸರಿಲೇರು ನೀಕೆವರು' ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿ ಚಿತ್ರತಂಡ ಇಂದು ತಿರುಪತಿಗೆ ಭೇಟಿ ನೀಡಿದೆ. ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್, ಮಗಳಾದ ಸಿತಾರ, ವಿಜಯ ಶಾಂತಿ, ನಿರ್ದೇಶಕ ಅನಿಲ್ ರಾವಿಪುಡಿ, ನಿರ್ಮಾಪಕ ದಿಲ್ ರಾಜು, ಎಸ್. ವಿ. ಪ್ರಸಾದ್ ಹಾಗೂ ಇನ್ನಿತರರು ಇಂದು ತಿರುಪತಿಗೆ ತೆರಳಿ ಅತಿಥಿ ಗೃಹದಲ್ಲಿ ತಂಗಿದ್ದಾರೆ. ನಾಳೆ ಬೆಳಗ್ಗೆ ವಿಐಪಿ ದರ್ಶನ ಸಮಯದಲ್ಲಿ ಎಲ್ಲರೂ ದೇಗುಲಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ. ರೇಣಿಗುಂಟ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಮಹೇಶ್ ಬಾಬು ಅವರನ್ನು ನೋಡಲು ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿದ್ದರು. ನಂತರ ತಿರುಮಲ ಅತಿಥಿ ಗೃಹಕ್ಕೆ ಚಿತ್ರತಂಡ ಆಗಮಿಸುತ್ತಿದ್ದಂತೆ ಅಲ್ಲಿ ಕೂಡಾ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜನರ ಗುಂಪಿನ ನಡುವೆಯೇ ಮಹೇಶ್ ಬಾಬು ಹಾಗೂ ಚಿತ್ರತಂಡ ಅತಿಥಿ ಗೃಹ ಸೇರಿಕೊಂಡಿತು.