ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಕಳೆದ ವರ್ಷ ಲಾಕ್‌ಡೌನ್ ಹೇರಿದಾಗಲೇ ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಈ ವರ್ಷದ ಆರಂಭದಲ್ಲಿ ಕೆಲವೊಂದು ಚಿತ್ರಗಳು ಬಿಡುಗಡೆಯಾದ ಮೇಲೆ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳುವ ಮಟ್ಟಕ್ಕೆ ಬಂದಿತ್ತು. ಇನ್ನೇನು ಎಲ್ಲವೂ ಸರಿ ಹೋಯ್ತು ಎನ್ನುವಷ್ಟರಲ್ಲಿ ಮತ್ತೆ ಕೊರೊನಾ ಎರಡನೇ ಅಲೆಯ ಕಾರ್ಮೋಡ ಆವರಿಸಿ, ಚಿತ್ರರಂಗದ ಚಟುವಟಿಕೆಗಳು ಬಂದ್ ಆಗಿದೆ. ಇದರಿಂದ ಚಿತ್ರರಂಗವನ್ನೇ ನಂಬಿರುವ ಅದೆಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಇಂತಹ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್, ಬರೀ ಬೆಳ್ಳಿ ತೆರೆ ಮೇಲೆ ಹೀರೋ, ಹೀರೋಯಿನ್ ಆಗದೇ ಕೊರೊನಾ ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರು, ತಂತ್ರಜ್ಞರು, ಹಿರಿಯ ಪೋಷಕ ಕಲಾವಿದರ ಕಷ್ಟಕ್ಕೆ ಮಿಡಿಯುವ ಮೂಲಕ ನಿಜ ಜೀವನದಲ್ಲೂ ರಿಯಲ್ ಹೀರೋ, ಹೀರೋಯಿನ್ ಆಗಿದ್ದಾರೆ.
ಅದರಲ್ಲಿ ಮೊದಲಿಗರು ರಿಯಲ್ ಸ್ಟಾರ್ ಉಪೇಂದ್ರ. ಇವರು ಕನ್ನಡ ಚಿತ್ರರಂಗದ ಮೂರು ಸಾವಿರ ಕಾರ್ಮಿಕರಿಗೆ ಆಹಾರದ ಕಿಟ್ಗಳನ್ನ ವಿತರಿಸಿದರು. ಉಪೇಂದ್ರ ಅವರ ಈ ಸಹಾಯಕ್ಕೆ ಹಿರಿಯ ನಟಿ ಬಿ. ಸರೋಜಾದೇವಿ 4 ಲಕ್ಷ, ಸಾಧು ಕೋಕಿಲ 2 ಲಕ್ಷ, ನಿರ್ದೇಶಕ ಪವನ್ ಒಡೆಯುರ್ 20 ಸಾವಿರ, ನಟ ಶೋಭರಾಜ್ 10 ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಉಪೇಂದ್ರ ಕೆಲಸಕ್ಕೆ ಕೈ ಜೋಡಿಸಿದರು.
ಸಿನಿಮಾ ತಾರೆಯರು, ದಾನಿಗಳು ಕೊಟ್ಟ ಹಣದಿಂದ ಉಪೇಂದ್ರ, ಕನ್ನಡ ಚಿತ್ರರಂಗಂದ ಕಾರ್ಮಿಕರ ಒಕ್ಕೂಟ, ತಂತ್ರಜ್ಞರು, ಹಿರಿಯ ಪೋಷಕ ಕಲಾವಿದರು, ಸಹ ಕಲಾವಿದರು, ಸಂಗೀತ ನಿರ್ದೇಶಕರು, ಸಾಹಸ ನಿರ್ದೇಶಕರು ಸೇರಿದಂತೆ ಪ್ರತಿಯೊಂದು ಚಿತ್ರರಂಗದ ವಿಭಾಗಗಳ ಸಂಘಕ್ಕೆ ಆಹಾರ ಕಿಟ್ಗಳನ್ನು ವಿತರಿಸಿದ್ದಾರೆ. ಇದರ ಜೊತೆ ಕಷ್ಟದಲ್ಲಿದ್ದ ರೈತರ ಬೆಳೆಗಳನ್ನ ಸರಿಯಾದ ಬೆಲೆಗೆ ಖರೀದಿಸಿ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಉಪೇಂದ್ರ ನಿಜ ಜೀವನದಲ್ಲಿ ನಿಜವಾದ ಹೀರೋ ಆಗಿದ್ದಾರೆ.
ಉಪೇಂದ್ರ ಬಳಿಕ ಜನರಿಗೆ ಸಹಾಯಕ್ಕೆ ಬಂದ ಮತ್ತೊಬ್ಬ ಸ್ಟಾರ್ ನಟ ಕಿಚ್ಚ ಸುದೀಪ್. ಆಸ್ಪತ್ರೆಯೊಂದಕ್ಕೆ 300 ಆಕ್ಸಿಜನ್ ಸಿಲಿಂಡರ್ ನೀಡುವ ಮೂಲಕ ಸುದೀಪ್ ಹಲವರ ಜೀವ ಉಳಿಸಿದರು. ಸುದೀಪ್ ಚಾರಿಟೆಬಲ್ ಸೊಸೈಟಿಯಿಂದ ಇವತ್ತಿಗೂ ಕೊರೊನಾ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲಾಗುತ್ತಿದೆ. ಅದರಲ್ಲಿ ಚಿತ್ರರಂಗದ ಹಿರಿಯ ಪೋಷಕ ಕಲಾವಿದರು, ಆಸ್ಪತ್ರೆ ಸಿಬ್ಬಂದಿ, ಜನ ಸಾಮಾನ್ಯರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಸುದೀಪ್ ಕೂಡ ರಿಯಲ್ ಹೀರೋ ಆಗಿದ್ದಾರೆ.
ಇದೀಗ ರಾಕಿಂಗ್ ಸ್ಟಾರ್ ಯಶ್ 3 ಸಾವಿರ ಸಿನಿ ಕಾರ್ಮಿಕರಿಗೆ ನೆರವು ನೀಡುತ್ತಿದ್ದಾರೆ. ಹಿರಿಯ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಕುಟುಂಬಗಳಿಗೆ ತಾವು ಸಂಪಾದನೆ ಮಾಡಿರುವ ಸ್ವಂತ ಹಣದಿಂದ ತಲಾ 5 ಸಾವಿರ ರೂಪಾಯಿ ಹಣ ನೀಡುತ್ತಿದ್ದಾರೆ. ತಮ್ಮ ಯಶೋಮಾರ್ಗ ಫೌಂಡೇಷನ್ನಿಂದ ಯಶ್ ಈ ಹಿಂದೆ ಕೊಪ್ಪಳ ಜನತೆಯ ನೀರಿನ ಸಮಸ್ಯೆ ನೀಗಿಸುವ ಮೂಲಕ ಭಗೀರಥ ಆಗಿದ್ದರು. ಈಗ ಕೊರೊನಾ ಸಮಯದಲ್ಲಿ ಸಿನಿಮಾ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವ ಮೂಲಕ ರಿಯಲ್ ಹೀರೋ ಆಗಿದ್ದಾರೆ.
ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಆಸರೆ ಎಂಬ ಹೆಸರಿನಲ್ಲಿ ಕಳೆದ ಎರಡು ವಾರಗಳಿಂದ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಪತ್ನಿ ಗೀತಾ ಸಹಕಾರದಿಂದ ಶಿವಣ್ಣ ಬಾಯ್ಸ್ ನಿತ್ಯ 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಸೆಂಚುರಿ ಸ್ಟಾರ್ ಕೂಡ ಹಸಿದವರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ.
ಇನ್ನು, ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಾಜ್ಯ ಸರ್ಕಾರಕ್ಕೆ 50 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದರು.
ಕನ್ನಡ ಚಿತ್ರರಂಗದಲ್ಲಿ ಬೋಲ್ಡ್ ನಟಿ ಅಂತಾ ಕರೆಯಿಸಿಕೊಂಡಿರುವ ರಾಗಿಣಿ ದ್ವಿವೇದಿ ಕೂಡ ಕಳೆದ ಒಂದು ತಿಂಗಳಿನಿಂದ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಜೆನೆಟಿಕ್ಸ್ ಸಂಸ್ಥೆಯಿಂದ ನಿತ್ಯ 500 ಜನಕ್ಕೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಮೂಲಕ ರಾಗಿಣಿ ದ್ವೀವೇದಿ ಕೂಡ ರಿಯಲ್ ಹೀರೋಯಿನ್ ಆಗಿದ್ದಾರೆ.
ಇದರ ಜೊತೆಗೆ ಸಂಜನಾ ಗಲ್ರಾನಿ ಕೂಡ ಸಂಜನಾ ಎಂಬ ಫೌಂಡೇಷನ್ ಹೆಸರಲ್ಲಿ ಪ್ರತಿದಿನ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಮತ್ತೊಂದು ಕಡೆ ನಿರ್ದೇಶಕ ಆರ್ ಚಂದ್ರು ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಕೂಡ ಭುವನಂ ಹೆಸರಲ್ಲಿ ಪ್ರತಿನಿತ್ಯ ಊಟ ನೀಡುವ ಮೂಲಕ ರಿಯಲ್ ಸ್ಟಾರ್ಸ್ ಆಗಿದ್ದಾರೆ.
ಅಷ್ಟೇ ಅಲ್ಲ ಹಾಸ್ಯ ನಟ ಚಿಕ್ಕಣ್ಣ, ನಟಿ ಪ್ರಣೀತಾ ಸುಭಾಷ್ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ತಾರೆಯರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲಿ ರಿಯಲ್ ಹೀರೋ, ಹೀರೋಯಿನ್ ಅಂತಾ ಕರೆಯಿಸಿಕೊಂಡಿದ್ದಾರೆ.