ಬೆಂಗಳೂರು: ಕೊರೊನಾ ವಿರುದ್ಧ ಹೋರಾಟಕ್ಕೆ ಸೆಲಬ್ರಿಟಿಗಳನ್ನು ಬಳಸಿಕೊಳ್ಳಿ ಎಂದು ಸ್ಯಾಂಡಲ್ವುಡ್ನ ''ಗೋದ್ರಾ'' ಚಿತ್ರತಂಡ ಮನವಿ ಮಾಡಿದೆ. ಈಗಾಗಲೇ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಗಣ್ಯರು ಈಗಾಗಲೇ ಈ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಬೇಕಿದೆ ಎಂದಿರುವ ಗೋದ್ರಾ ಚಿತ್ರತಂಡ ಯಾವುದನ್ನು ಪ್ರಚಾರ ಮಾಡಬೇಕು, ಯಾವುದು ಸುಳ್ಳು ಎಂಬ ಕುರಿತು ಸರ್ಕಾರ ಮತ್ತು ಆರೋಗ್ಯ ಇಲಾಖೆ ಕಾಲಕಾಲಕ್ಕೆ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ ಅದು ಸೆಲೆಬ್ರಿಟಿಗೂ ತಲುಪಿದರೆ, ಅವರು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳಲು ಅನುಕೂಲ ಆಗುತ್ತದೆ ಎಂದಿದೆ.
ಇದರ ಜೊತೆಗೆ ಟಾಪ್ ಸೆಲಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ದಿನವೂ ಸರ್ಕಾರ ಅವರಿಂದ ಜಾಗೃತಿ ಕೆಲಸ ಮಾಡಿಸಬೇಕೆಂದು ವಿನಂತಿ ಮಾಡಿದೆ.
ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿ, ಪೊಲೀಸ್, ಪೌರ ಕಾರ್ಮಿಕರು, ವೈದ್ಯರು, ನರ್ಸ್ ಹೀಗೆ ಕೊರೊನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಈ ಮೂಲಕ ‘ಗೋದ್ರಾ’ ಕನ್ನಡ ಸಿನಿಮಾ ತಂಡ ಅಭಿನಂದನೆ ಸಲ್ಲಿಸಿದೆ. ಇಡೀ ಜಗತ್ತನ್ನೇ ತಲ್ಲಣಕ್ಕೀಡು ಮಾಡಿರುವ ಕೊರೊನಾ ವಿರುದ್ಧ ಭಾರತವೂ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದು ವೈರಸ್ ಹರಡುವುದನ್ನು ತಡೆಗಟ್ಟಲು ಹರಸಾಹಸ ಪಡುತ್ತಿದೆ. ಜನರಿಂದ ಸಿಗುತ್ತಿರುವ ಅಸಹಕಾರ, ಜಾಗೃತಿಯಿರದ ಕಾರಣಕ್ಕೆ ವೈರಸ್ ತೀವ್ರವಾಗಿ ಹರಡುತ್ತಿದೆ ಈ ವೇಳೆ ಗೋದ್ರಾ ಸಿನಿಮಾ ತಂಡದ ಕಳಕಳಿ ಶ್ಲಾಘನೀಯವಾಗಿದೆ.