ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಸಲಗ ರಿಲೀಸ್ಗೆ ರೆಡಿಯಾಗುತ್ತಿದೆ. ಅದಕ್ಕೆ ತಕ್ಕಂತೆ ಚಿತ್ರ ತಂಡ ಎಲ್ಲಾ ರೀತಿಯಲ್ಲೂ ಸಿದ್ಧವಾಗುತ್ತಿದ್ದು, ಸದ್ಯಕ್ಕೆ ಚಿತ್ರತಂಡ ಟೈಟಲ್ ಟ್ರ್ಯಾಕ್‌ನ ಫೈನಲ್ ಕಂಪೋಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಚಿತ್ರ ತಂಡದ ಮಾಹಿತಿ ಪ್ರಕಾರ ಟ್ರೇಲರ್ ಲಾಂಚ್ಗೂ ಮುನ್ನ ಟೈಟಲ್ ಟ್ರ್ಯಾಕ್ ಹೊರ ತಂದು, ಅದರದ್ದೇ ಒಂದು ಹವಾ ಸೃಷ್ಟಿಸಿದ ನಂತರವೇ ಚಿತ್ರ ತೆರೆಗೆ ಬರಲಿದೆಯಂತೆ. ಹಾಗಾಗಿಯೇ, ಚಿತ್ರದ ನಿರ್ದೇಶಕ ಕಮ್ ನಾಯಕ ನಟ ದುನಿಯಾ ವಿಜಯ್, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತವರ ತಂಡ ಚೆನ್ನೈಗೆ ಪ್ರಯಾಣ ಬೆಳೆಸಿದೆ.
ಅಲ್ಲಿ ಟೈಟಲ್ ಟ್ರ್ಯಾಕ್ ಫೈನಲ್ ಟಚ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಟಗರು ಖ್ಯಾತಿಯ ನಿರ್ಮಾಪಕ ಕೆ ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದ ಚಿತ್ರೋದ್ಯಮದಲ್ಲಿ ಹಾಗೂ ಸಿನಿಮಾಸಕ್ತರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ದುನಿಯಾ ವಿಜಯ್ ಜತೆಗೆ ಸಂಗೀತ ನಿರ್ದೇಶಕ ಚರಣ್ ರಾಜ್.
ಈವರೆಗೂ ಬೆಳ್ಳಿತೆರೆಯಲ್ಲಿ ನಾಯಕರಾಗಿ ಅಬ್ಬರಿಸಿದ ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಸಲಗ ಚಿತ್ರ ಸ್ಯಾಂಡಲ್ವುಡ್ನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಮನ ಸೆಳೆಯುತ್ತಿದೆ.