ವಾಷಿಂಗ್ಟನ್: ಖ್ಯಾತ ಹಾಲಿವುಡ್ ನಟ ರಾಬರ್ಟ್ ಪ್ಯಾಟಿನ್ಸನ್ಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು ಲಂಡನ್ನಲ್ಲಿ ಜರುಗುತ್ತಿದ್ದ ಬಹುನಿರೀಕ್ಷಿತ 'ದಿ ಬ್ಯಾಟ್ಮ್ಯಾನ್' ಚಿತ್ರೀಕರಣ ಸ್ಥಗಿತಗೊಂಡಿದೆ.
ಲಾಕ್ ಡೌನ್ ಸಡಿಲಕೊಂಡ ಬಳಿಕ 'ದಿ ಬ್ಯಾಟ್ಮ್ಯಾನ್' ಚಿತ್ರತಂಡ ಲಂಡನ್ಗೆ ತೆರಳಿ ಶೂಟಿಂಗ್ ಆರಂಭಿಸಿತ್ತು. ಆದರೆ ಚಿತ್ರೀಕರಣ ಆರಂಭಗೊಂಡ ಕೆಲವೇ ದಿನಗಳಲ್ಲಿ ರಾಬರ್ಟ್ ಪ್ಯಾಟಿನ್ಸನ್ಗೆ ಕೊರೊನಾ ಸೋಂಕು ತಗುಲಿದೆ ಎಂದು ವ್ಯಾನಿಟಿ ಫೇರ್ ವರದಿ ಮಾಡಿದೆ. ರಾಬರ್ಟ್ಗೆ ಕೊರೊನಾ ಪಾಸಿಟಿವ್ ದೃಢವಾದ ನಂತರ ಚಿತ್ರತಂಡದ ಇತರ ಸದಸ್ಯರು ಕೂಡಾ ಕೊರೊನಾ ಟೆಸ್ಟ್ಗೆ ಒಳಗಾಗಿದ್ದು ವರದಿಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಸುಮಾರು 7 ವಾರಗಳ ಕಾಲ ಶೂಟಿಂಗ್ ನಡೆಸಿದ್ದ ಚಿತ್ರತಂಡ ಕೊರೊನಾ ವೈರಸ್ ಭೀತಿಯಿಂದ ಚಿತ್ರೀಕರಣವನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ಮತ್ತೆ ರಾಬರ್ಟ್ ಪ್ಯಾಟಿನ್ಸನ್ಗೆ ಸೋಂಕು ತಗುಲಿರುವುದರಿಂದ ಮತ್ತೆ ಚಿತ್ರೀಕರಣ ಸ್ಥಗಿತಗೊಂಡಿದೆ.
ಮ್ಯಾಟ್ ರೀವ್ಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇನ್ನೂ ಮೂರು ತಿಂಗಳ ಕಾಲ ಚಿತ್ರೀಕರಣ ಬಾಕಿ ಇದೆ. ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣವನ್ನು ಮುಗಿಸುವುದಾಗಿ ತಿಳಿಸಿದ್ದಾರೆ. ಉಳಿದ ಭಾಗದ ಚಿತ್ರೀಕರಣಕ್ಕಾಗಿ ಮತ್ತೊಂದು ತಂಡ ಸೆಟ್ ತಯಾರಿಸುವಲ್ಲಿ ನಿರತವಾಗಿದೆ ಎನ್ನಲಾಗಿದೆ. ಸಿನಿಮಾವನ್ನು 2021 ಜೂನ್ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಈ ಮುನ್ನ ಘೋಷಿಸಲಾಗಿತ್ತು. ಆದರೆ ಇದೀಗ ಚಿತ್ರೀಕರಣ ಸ್ಥಗಿತಗೊಂಡ ಕಾರಣ ಮತ್ತೆ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದು 2021 ಅಕ್ಟೋಬರ್ನಲ್ಲಿ 'ದಿ ಬ್ಯಾಟ್ಮ್ಯಾನ್' ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ವಾರ್ನರ್ ಬ್ರದರ್ಸ್ ಸ್ಟುಡಿಯೋಸ್ ಮಾಹಿತಿ ನೀಡಿದೆ.
ಚಿತ್ರದಲ್ಲಿ ರಾಬರ್ಟ್ ಪ್ಯಾಟಿನ್ಸನ್ ಜೊತೆ ಪೌಲ್ ಡಾನೊ, ಜಾನ್ ಟರ್ಟುರೊ, ಆ್ಯಂಡಿ ಸೆರ್ಕಿಸ್, ಕೊಲಿನ್ ಫಾರೆಲ್ ಹಾಗೂ ಜೋ ಕ್ರಾವಿಟ್ಜ್ ಹಾಗೂ ಇನ್ನಿತರರು ನಟಿಸಿದ್ದಾರೆ.