ಅಜಯ್ ರಾವ್ ಹಾಗೂ ಸಿಂಧು ಲೋಕನಾಥ್ ಅಭಿನಯದ 'ಕೃಷ್ಣ ಟಾಕೀಸ್' ಚಿತ್ರಕ್ಕೆ ಸ್ಯಾಂಡಲ್ವುಡ್ ನಲ್ಲ ಹಾಗೂ ಮಲ್ಲ ಸಾಥ್ ನೀಡಿದ್ದಾರೆ. ಕಾಶಿನಾಥ್ ಅಭಿನಯದ 'ಓಳ್ ಮುನಿಸ್ವಾಮಿ' ಚಿತ್ರದ ಖ್ಯಾತಿಯ ಆನಂದ್ ಪ್ರಿಯ ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ಸಂಗೀತ ನೀಡುತ್ತಿದ್ದು ಚಿತ್ರದಲ್ಲಿ ಒಂದು ಹಾಡನ್ನು ಹಾಡಲು ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ.

ಇದಕ್ಕೂ ಮುನ್ನ 'ಕೃಷ್ಣ ಟಾಕೀಸ್' ಚಿತ್ರದ ಟೀಸರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಲಾಂಚ್ ಮಾಡಿ ಚಿತ್ರಕ್ಕೆ ವಿಶ್ ಮಾಡಿದ್ದರು. ಈಗ ಕಿಚ್ಚ ಸುದೀಪ್, ಕೃಷ್ಣನಿಗೆ ಸಾಥ್ ನೀಡಿದ್ದು, ನಲ್ಲ-ಮಲ್ಲನ ಹಾರೈಕೆ ಕೃಷ್ಣನಿಗೆ ಸಿಕ್ಕಂತಾಗಿದೆ. ಸದ್ಯಕ್ಕೆ 'ಕೃಷ್ಣ ಟಾಕೀಸ್' ಚಿತ್ರತಂಡ ಡಬ್ಬಿಂಗ್ನಲ್ಲಿ ಬ್ಯುಸಿ ಇದೆ. ಮೂರು ದಿನಗಳ ಹಿಂದೆ ಹಾಸ್ಯನಟ ಉಮೇಶ್ ಹಾಗೂ ರಂಗಭೂಮಿ ಕಲಾವಿದ ಜತ್ತಿ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮಾಡಿದ್ದರು. ಮುಂದಿನ ವಾರ ಅಜಯ್ ರಾವ್ ಹಾಗೂ ಸಿಂಧು ತಮ್ಮ ಪಾತ್ರಗಳಿಗೆ ಡಬ್ ಮಾಡಲಿದ್ದಾರೆ. ಚಿತ್ರದ ಟ್ರೈಲರನ್ನು ಶೀಘ್ರದಲ್ಲೆ ಲಾಂಚ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಒಂದು ಚಿಕ್ಕ ಗ್ಯಾಪ್ ನಂತರ ಅಜಯ್ ರಾವ್ ಕೃಷ್ಣ ಟೈಟಲ್ ಸೀರಿಸ್ ಸಿನಿಮಾದಲ್ಲಿ ಮತ್ತೆ ನಟಿಸುತ್ತಿರುವುದು ಈ ಸಿನಿಮಾ ವಿಶೇಷ ಎನ್ನಬಹುದು. ಇನ್ನು ಮದುವೆ ಆದಮೇಲೆ ಚಿತ್ರರಂಗದಿಂದ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡಿದ್ದ ಸಿಂಧು ಲೋಕನಾಥ್ ಮತ್ತೆ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ವಾಪಸ್ಸಾಗಿದ್ದಾರೆ.
