ನಿರೂಪಕ, ನಿರ್ದೇಶಕ, ನಟನಾಗಿ ಸ್ಯಾಂಡಲ್ವುಡ್ನಲ್ಲಿ ಎವರ್ ಗ್ರೀನ್ ಹೀರೋ ಎಂದು ಕರೆಸಿಕೊಂಡವರು ನಟ ರಮೇಶ್ ಅರವಿಂದ್. 100 ಸಿನಿಮಾಗಳ ಸರದಾರ ರಮೇಶ್ ಅರವಿಂದ್ ನಿನ್ನೆಯಷ್ಟೇ ತಮ್ಮ 55ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ರಮೇಶ್ ಅರವಿಂದ್ 101ನೇ ಸಿನಿಮಾ 'ಶಿವಾಜಿ ಸುರತ್ಕಲ್' ಟೀಸರ್ ಕೂಡಾ ನಿನ್ನೆ ಬಿಡುಗಡೆಯಾಗಿದೆ. ಇದರಲ್ಲಿ ರಮೇಶ್ ಎರಡು ಡಿಫರೆಂಟ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 'ಶಿವಾಜಿ ಸುರತ್ಕಲ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ರಮೇಶ್ ಅರವಿಂದ್ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. ತಾವು ಇದುವರೆಗೂ ಅಭಿನಯಿಸಿರುವ ಕೆಲವೊಂದು ಸಿನಿಮಾಗಳ ಸೀಕ್ವೆಲ್ ಮಾಡಬೇಕು ಎಂಬ ಆಸೆ ರಮೇಶ್ಗೆ ಇದೆಯಂತೆ. ಅದರಲ್ಲಿ 2005ರಲ್ಲಿ ಬಂದ ಫ್ಯಾಮಿಲಿ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ 'ರಾಮ ಶಾಮ ಭಾಮ' ಚಿತ್ರದ ಎರಡನೇ ಭಾಗ ಮಾಡುವ ಪ್ಲ್ಯಾನ್ ಮಾಡಿದ್ದಾರೆ ರಮೇಶ್. ಆದರೆ ಕಮಲ್ ಹಾಸನ್ ಬ್ಯುಸಿ ಇರುವ ಕಾರಣ ಅದು ತಡವಾಗುತ್ತಿದೆಯಂತೆ. ಇದರೊಂದಿಗೆ 1998ರಲ್ಲಿ ಬಿಡುಗಡೆಯಾದ 'ತುತ್ತಾ ಮುತ್ತಾ' ಚಿತ್ರದ ಭಾಗ-2 ಸಿನಿಮಾ ತೆಗೆಯುವ ಆಸೆಯನ್ನೂ ಕೂಡಾ ರಮೇಶ್ ವ್ಯಕ್ತಪಡಿಸಿದ್ದಾರೆ.
ಇನ್ನು ರಮೇಶ್ ಅರವಿಂದ್ ಸಿನಿ ಕರಿಯರ್ನಲ್ಲಿ 'ಅಮೃತ ವರ್ಷಿಣಿ' ಸಿನಿಮಾ ಅವರನ್ನು ಬಹಳ ಕಾಡಿತ್ತಂತೆ. ಅದೇ ಚಿತ್ರದ ಹ್ಯಾಂಗೋವರ್ನಲ್ಲಿ ಬಹಳ ದಿನ ಇದ್ದರಂತೆ. ಈ ಚಿತ್ರದಲ್ಲಿ ಸುಹಾಸಿನಿ ಪತಿ ಪಾತ್ರ ಮಾಡಿದ್ದ ಶರತ್ ಬಾಬು ಅವರನ್ನು ಕೊಲೆ ಮಾಡಿ ನಂತರ ಮನೆಗೆ ಬಂದು ಸುಹಾಸಿನಿ ಅವರನ್ನು ನೋಡುವ ಕ್ಷಣ ಅವರನ್ನು ತುಂಬಾ ಕಾಡಿತ್ತಂತೆ. ನಾನು ಅದೇ ಪಾತ್ರದ ಹ್ಯಾಂಗೋವರ್ನಲ್ಲಿ ಬಹಳ ದಿನಗಳ ಕಾಲ ಇದ್ದೆ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಅಂದಿಗೂ ಇಂದಿಗೂ ಕೂಡಾ ರಮೇಶ್ ಅರವಿಂದ್ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ನಟರಾಗಿ ಮಿಂಚುತ್ತಿದ್ದಾರೆ.