ಸ್ಯಾಂಡಲ್ವುಡ್ನ ತಾರಾ ಜೋಡಿ ರಾಧಿಕಾ ಪಂಡಿತ್ - ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅದರಲ್ಲೂ ರಾಧಿಕಾ ಪಂಡಿತ್ ತಮ್ಮ ಪುಟಾಣಿ ಮಕ್ಕಳ ತುಂಟಾಟದ ದೃಶ್ಯಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಹೊಸ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ 5ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ಯಶ್ ಹಾಗು ರಾಧಿಕಾ ಪಂಡಿತ್, ಈಗ ಮಕ್ಕಳಾದ ಐರಾ ಮತ್ತು ಯಥರ್ವ್ ಕುರಿತಾದ ಒಂದು ಮುದ್ದಾದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಐರಾ ಯಶ್ ಮತ್ತು ಯಥರ್ವ್ ಜೊತೆಯಾಗಿ ಕುಳಿತಿದ್ದಾರೆ. ಐರಾ ತಿಂಡಿಯನ್ನ ತಿನ್ನುತ್ತಾ, ತಾನು ತಿನ್ನುವ ತಿಂಡಿಯನ್ನ ಯಥರ್ವನಿಗೂ ತಿನ್ನಿಸಲು ಹೋಗಿದ್ದಾಳೆ. ಆಗ ರಾಧಿಕಾ ಪಂಡಿತ್, ಪುತ್ರಿಯನ್ನು ತಡೆಯುತ್ತಾರೆ. ನಂತರ ಐರಾ, ಪ್ರೀತಿಯಿಂದ ತಮ್ಮನನ್ನು ಮುದ್ದು ಮಾಡಿದ್ದಾಳೆ.
ಈ ಸುಂದರ ವಿಡಿಯೋವನ್ನು ರಾಧಿಕಾ ಪಂಡಿತ್ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಐರಾ ಹಾಗು ಯಥರ್ವ್ ಪ್ರೀತಿ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ತಂದೆ-ತಾಯಿಯಂತೆ ಐರಾ ಮತ್ತು ಯಥರ್ವ್ ಸ್ಟಾರ್ ಕಿಡ್ಸ್ಗಳಾಗಿ ಮಿಂಚುತ್ತಿದ್ದಾರೆ. ಇತ್ತ ಯಶ್ 'ಕೆಜಿಎಫ್ ಚಾಪ್ಟರ್ -2' ಸಿನಿಮಾದ ಗುಂಗಿನಲ್ಲಿದ್ದಾರೆ. ರಾಧಿಕಾ ಪಂಡಿತ್ ಸಹ ಮಕ್ಕಳ ಪಾಲನೆ -ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ.