ಕನ್ನಡ ಚಿತ್ರರಂಗದ ರಾಜಕುಮಾರ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಒಂದೂವರೆ ತಿಂಗಳು ಆಯಿತು. ಆದರೆ, ಈ ರಾಜರತ್ನನ ನಗು, ಯಾರಿಗೂ ಗೊತ್ತಿಲ್ಲದೆ ಮಾಡಿರೋ ಸಮಾಜಮುಖಿ ಕೆಲಸಗಳು ಎಲ್ಲರಲ್ಲೂ ಅಳಿಯದೆ ಉಳಿದಿದೆ. ಇದೀಗ, ಧಾರವಾಡ ಜಿಲ್ಲೆಯ ಮನಗುಂಡಿಯ ದ್ರಾಕ್ಷಾಯಿಣಿ ಪಾಟೀಲ್ ಎಂಬ ಮಹಿಳೆ ಪುನೀತ್ ರಾಜ್‍ಕುಮಾರ್ ಅಪ್ಪಟ ಅಭಿಮಾನಿ. ಹೀಗಾಗಿ, ನೆಚ್ಚಿನ ನಟನ ಸಮಾಧಿಗೆ ಬರೋಬ್ಬರಿ 550 ಕಿಲೋಮೀಟರ್ ಮ್ಯಾರಥಾನ್ ಮೂಲಕ 14 ದಿನಗಳ ಕಾಲ ಧಾರವಾಡದಿಂದ ಬೆಂಗಳೂರಿನಲ್ಲಿರುವ ಪುನೀತ್ ರಾಜ್‍ಕುಮಾರ್ ಸ್ಮಾರಕಕ್ಕೆ ಬಂದು ತಲುಪಿದ್ದರು.
30 ವರ್ಷದ ದ್ರಾಕ್ಷಾಯಿಣಿ ಪುನೀತ್ ರಾಜ್‍ಕುಮಾರ್ ಅವರ ಸಿನಿಮಾಗಳನ್ನ ನೋಡ್ತಾ ಅಭಿಮಾನಿಯಾಗಿದ್ದು, ತನ್ನ ಮೂವರು ಮಕ್ಕಳೊಂದಿಗೆ ಮ್ಯಾರಥಾನ್ ಆರಂಭಿಸಿ, ಮಾರ್ಗ ಮಧ್ಯೆ ಪುನೀತ್ ಅವರ ಸಮಾಜ ಸೇವೆ ಕುರಿತಂತೆ ಹಾಗೂ ನೇತ್ರದಾನ ಕುರಿತಂತೆ ಅರಿವನ್ನ ಮೂಡಿಸುತ್ತಾ ಬೆಂಗಳೂರು ಬಂದು ತಲುಪಿದ್ದಾರೆ. ಈ ಅಪರೂಪದ ಅಭಿಮಾನಿಯನ್ನ, ಡಾ.ರಾಜ್ ಕುಮಾರ್ ಅಭಿಮಾನಿ ಸಂಘ, ಶಿವರಾಜ್ ಕುಮಾರ್ ಅಭಿಮಾನಿ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ದೊಡ್ಮನೆಯಿಂದ ಯುವರಾಜ್ ಕುಮಾರ್, ದ್ರಾಕ್ಷಾಯಿಣಿ ಅವ್ರನ್ನ ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿ ಬರಮಾಡಿಕೊಂಡು ಸನ್ಮಾನ ಮಾಡಿದರು.
ಪುನೀತ್ ರಾಜ್‍ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ದ್ರಾಕ್ಷಾಯಿಣಿ ಕುಟುಂಬ ಶಿವರಾಜ್ ಕುಮಾರ್ ಅವ್ರನ್ನ ಭೇಟಿ ಮಾಡಿದೆ. ನಾಗವಾರದ ನಿವಾಸದಲ್ಲಿ ದ್ರಾಕ್ಷಾಯಿಣಿ ಮತ್ತು ಕುಟುಂಬ, ನಟ ಶಿವರಾಜ್ ಕುಮಾರ್ ಅವ್ರನ್ನ ಭೇಟಿ ಮಾಡಿ ಸಂತೋಷ ಪಟ್ಟಿದ್ದಾರೆ. ಈ ಸಮಯದಲ್ಲಿ ದ್ರಾಕ್ಷಾಯಿಣಿ ಹಾಗೂ ಕುಟುಂಬವನ್ನ ಶಿವರಾಜ್ ಕುಮಾರ್ ಮಾತನಾಡಿಸಿ, ಪೇಟ ತೊಡಿಸಿ ಗೌರವಿಸಿದ್ದಾರೆ. ಇದರ ಜೊತೆಗೆ ಕೆಲ ಹೊತ್ತು ಅಭಿಮಾನಿ ಕುಟುಂಬದ ಜೊತೆ ಶಿವರಾಜ್ ಕುಮಾರ್ ಕಾಲ ಕಳೆದು, ಯೋಗಕ್ಷೇಮ ವಿಚಾರಿಸಿ ಊರಿಗೆ ಸುರಕ್ಷಿತವಾಗಿ ತಲುಪುವಂತೆ ಹೇಳಿದ್ದಾರೆ.