ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸದ್ಯಕ್ಕೆ 'ಯುವರತ್ನ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. 'ಯುವರತ್ನ' ಟೀಸರ್ ನೋಡಿ ಥ್ರಿಲ್ ಆಗಿರುವ ಅಭಿಮಾನಿಗಳು ಸಿನಿಮಾಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಚಿತ್ರವೊಂದರ ಮುಹೂರ್ತ ಸಮಾರಂಭಕ್ಕೆ ಅತಿಥಿ ಆಗಿ ಆಗಮಿಸಿದ್ದ ಪುನೀತ್ ರಾಜ್ಕುಮಾರ್, 'ಯುವರತ್ನ' ಚಿತ್ರದ ಬಗ್ಗೆ ಮಾತನಾಡಿದರು. ಜೊತೆಗೆ ತಮ್ಮ ಮುಂದಿನ ಚಿತ್ರ 'ಜೇಮ್ಸ್' ಬಗ್ಗೆ ಕೂಡಾ ಪುನೀತ್ ಮಾತನಾಡಿದ್ದಾರೆ. 'ಯುವರತ್ನ' ಚಿತ್ರದ ಶೂಟಿಂಗ್ ಶೇಕಡಾ 65ರಷ್ಟು ಮುಗಿದಿದ್ದು, ಇನ್ನು ಶೇಕಡಾ 35 ಭಾಗವಷ್ಟೇ ಬಾಕಿ ಇದೆ. ಇನ್ನು 'ಮಾಯಾ ಬಜಾರ್' ಸಿನಿಮಾದ ಪ್ರಮೋಷನಲ್ ಹಾಡಿನಲ್ಲಿ ಕೂಡಾ ನಾನು ಸ್ಟೆಪ್ ಹಾಕಿದ್ದು, ಆ ಸಿನಿಮಾ ಕೂಡಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದರು. 'ಜೇಮ್ಸ್' ಚಿತ್ರದ ಬಗ್ಗೆ ಮಾತನಾಡಿದ ಪುನೀತ್, ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ 'ಜೇಮ್ಸ್' ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಇತ್ತೀಚೆಗೆ ತಾವು ಸ್ಟಂಟ್ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಪುನೀತ್, ನಾನು ಸಿನಿಮಾಗಷ್ಟೇ ಸ್ಟಂಟ್ ಅಭ್ಯಾಸ ಮಾಡುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಸ್ಟಂಟ್ ಪ್ರಾಕ್ಟೀಸ್ ಮಾಡುತ್ತೇನೆ ಎಂದರು.