ಜನಸಾಮಾನ್ಯರು ಕುಡಿದು ವಾಹನ ಚಾಲನೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದರೆ ಅದು ಸಾಮಾನ್ಯ ವಿಷಯ. ಆದರೆ ಸೆಲಬ್ರಿಟಿಗಳು ಆ ಕೆಲಸ ಮಾಡಿದರೆ ಅದು ರಾತ್ರೋರಾತ್ರಿ ಹಾಟ್ ಟಾಪಿಕ್ ಆಗಿ ಬದಲಾಗಿಬಿಡುತ್ತದೆ.
ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರ ಪುತ್ರನೊಬ್ಬ ಡ್ರಂಕ್ ಅಂಡ್ ಡ್ರೈವ್ ಕೇಸ್ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಹೈದರಾಬಾದ್ ಜ್ಯೂಬ್ಲಿ ಹಿಲ್ಸ್ ರೋಡ್ ನಂಬರ್ 10ರ ಡೈಮಂಡ್ ಹೌಸ್ ಬಳಿ ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುವಾಗ ಅದೇ ದಾರಿಯಲ್ಲಿ ಬಂದ ಆ ನಿರ್ಮಾಪಕನ ಪುತ್ರನನ್ನು ಪರೀಕ್ಷೆಗೆ ಒಳಪಡಿಸಲು ಹೋದಾಗ ಪೊಲೀಸರೊಂದಿಗೆ ಆತ ವಾಗ್ವಾದಕ್ಕೆ ಇಳಿದಿದ್ದಾನೆ. ಆದರೆ ಪಟ್ಟು ಬಿಡದ ಪೊಲೀಸರು ಪರೀಕ್ಷೆಗೆ ಒಳಪಡಿಸಿದಾಗ ಆತ ಮದ್ಯ ಸೇವಿಸಿರುವುದು ಸಾಬೀತಾಗಿದೆ ಎನ್ನಲಾಗಿದೆ.
ಕೂಡಲೇ ಪೊಲೀಸರು ಆತನ ಮೇಲೆ ಕೇಸ್ ದಾಖಲಿಸಿ ಕಾರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ನಿರ್ಮಾಪಕನ ಪುತ್ರನ ಮೇಲೆ ಯಾವುದೇ ಕೇಸ್ ದಾಖಲಿಸದಿರುವಂತೆ ಅಲ್ಲಿನ ಎಂಎಲ್ಎ ಮುಖಾಂತರ ಪೊಲೀಸರಿಗೆ ಒತ್ತಡ ಕೂಡಾ ಹೇರಲಾಗಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಕೋರ್ಟಿನಲ್ಲಿ ವಿಚಾರಣೆ ಇದೆ ಎನ್ನಲಾಗಿದೆ. ಆದರೆ ಆ ನಿರ್ಮಾಪಕ ಯಾರು ಎಂಬುದನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿಲ್ಲ.