ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ 'ಲವ್ ಯೂ ರಚ್ಚು' ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಫೈಟರ್ ವಿವೇಕ್ ಕುಟುಂಬಕ್ಕೆ ನೆರವಾಗಲು ಚಿತ್ರದ ನಿರ್ಮಾಪಕ ಗುರುದೇಶ್ ಪಾಂಡೆ ಮುಂದಾಗಿದ್ದಾರೆ.
ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್ನಲ್ಲಿ ವಕೀಲರ ಜೊತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಗುರುದೇಶ್ ಪಾಂಡೆ ಅವರ ಪತ್ನಿ ಪ್ರೀತಿಕಾ ದೇಶ್ ಪಾಂಡೆ, ಫೈಟರ್ ವಿವೇಕ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಈಗ ವಿವೇಕ್ ತಾಯಿ ಉಮಾಜಿ ಅವರ ಹೆಸರಿನಲ್ಲಿ 5 ಲಕ್ಷ ರೂ.ನ ಚೆಕ್ ನೀಡುತ್ತೇವೆ ಎಂದು ಹೇಳಿದರು.
ಗುರುದೇಶ್ ಪಾಂಡೆ ತಲೆಮರೆಸಿಕೊಂಡಿಲ್ಲ. ಅವರು ಎಲ್ಲಿದ್ದಾರೆ ಅಂತ ನಮಗೂ ಗೊತ್ತಿಲ್ಲ. ಇವತ್ತು ರಾಮನಗರ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದೇವೆ. ಗುರುದೇಶ್ ಪಾಂಡೆ ಆದಷ್ಟು ಬೇಗ ಬರುತ್ತಾರೆ ಎಂದರು.
ಇದನ್ನೂ ಓದಿ: ಸಿನಿಮಾ ಶೂಟಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್: 'ಲವ್ ಯೂ ರಚ್ಚು' ಸಿನಿಮಾ ಫೈಟರ್ ಸಾವು
ಘಟನೆ ನಡೆದ ಸ್ಥಳದಲ್ಲಿ ಹೈಟೆನ್ಷನ್ ವೈರ್ ಇರಲಿಲ್ಲ. ಬೋರ್ವೆಲ್ಗೆ ಹಾಕಿದ್ದ ವೈರ್ ಇತ್ತು. ತನಿಖೆ ಆಗಿ ನಾವೇ ತಪ್ಪಿತಸ್ಥರು ಅಂತ ಸಾಬೀತಾದರೆ, ಅದರ ಹೊಣೆಯನ್ನು ನಾವೇ ಹೊರುತ್ತೇವೆ. ಶೂಟಿಂಗ್ ಸ್ಥಳದಲ್ಲಿ ನನ್ನ ಗಂಡ ಮತ್ತು ನಾನು ಇಬ್ಬರು ಇರಲಿಲ್ಲ. ನಾನು ಕ್ಷಮೆ ಕೇಳಿದರೂ, ಅವರ ಕುಟುಂಬಕ್ಕೆ ಆ ಮಗನನ್ನು ವಾಪಸ್ ಕೊಡಲು ಸಾಧ್ಯವಿಲ್ಲ ಎಂದು ಪ್ರೀತಿಕಾ ದೇಶ್ ಪಾಂಡೆ ಹೇಳಿದರು.
ಗುರುದೇಶ್ ಪಾಂಡೆ ಪರ ವಕೀಲ ನಾಗಭೂಷಣ್ ಮಾತನಾಡಿ, ಮೃತ ವಿವೇಕ್ ಜೊತೆ ವಿದ್ಯುತ್ ತಂತಿ ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಜಿತ್ ಅವರ ಆಸ್ಪತ್ರೆಯ ಖರ್ಚುವೆಚ್ಚ ಸಂಪೂರ್ಣವಾಗಿ ಗುರುದೇಶ್ ಪಾಂಡೆ ಅವರೇ ನೋಡಿಕೊಳ್ಳುತ್ತಿದ್ದಾರೆ. ಗುರುದೇಶ್ ಪಾಂಡೆಗೆ ಜಾಮೀನು ಸಿಕ್ಕ ಮೇಲೆ, ಶೂಟಿಂಗ್ ವೇಳೆ ನಿಜವಾಗ್ಲೂ ನಡೆದಿದ್ದೇನು ಎಂಬುವುದರ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆ ಬಿಡದಿಯ ಜೋಗಿನದೊಡ್ಡಿ ಬಳಿ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಅವಘಡ ಸಂಭವಿಸಿ ತಮಿಳುನಾಡು ಮೂಲದ ಫೈಟರ್ ವಿವೇಕ್ (28) ಮೃತಪಟ್ಟಿದ್ದರು. ಗಾಯಗೊಂಡಿರುವ ರಂಜಿತ್ ಎಂಬಾತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.