ಶಿವಮೊಗ್ಗದ ಚೆಲುವೆ ಪ್ರಿಯಾಂಕ ತಿಮ್ಮೇಶ್ ಕನ್ನಡದ ಕೆಲವೊಂದು ಚಿತ್ರಗಳಲ್ಲಿ ನಟಿಸಿದ ನಂತರ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ಮಿಂಚಿ ಬಂದರು. ಕನ್ನಡದ 'ಗಣಪ' ಚಿತ್ರದ ಮೂಲಕ ಪ್ರಿಯಾಂಕ ಎಲ್ಲರ ಗಮನ ಸೆಳೆದದ್ದು ಮಾತ್ರ ಸುಳ್ಳಲ್ಲ.
ಪ್ರಿಯಾಂಕ ತಿಮ್ಮೇಶ್ 'ಪಟಾಕಿ' ಚಿತ್ರದಲ್ಲಿ ಗಣೇಶ್ ತಂಗಿಯಾಗಿ ಅಭಿನಯಿಸಿದ್ದರು. ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಅರ್ಜುನ್ ಗೌಡ' ಚಿತ್ರದಲ್ಲಿ ಪ್ರಿಯಾಂಕ ನಾಯಕಿ ಆಗಿ ನಟಿಸುತ್ತಿದ್ದಾರೆ. ಜೊತೆಗೆ 'ಚಿಲಂ' ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಜೊತೆ ನಟಿಸಲು ಕೂಡಾ ಆಯ್ಕೆಯಾಗಿದ್ದರು. ಆದರೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈ ಸಿನಿಮಾಗಳೊಂದಿಗೆ 'ಭೀಮಸೇನ ನಳಮಹಾರಾಜ' ಚಿತ್ರದಲ್ಲಿ ಕೂಡಾ ಪ್ರಿಯಾಂಕ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಪ್ರಿಯಾಂಕ ತಿಮ್ಮೇಶ್ ಅಭಿನಯದ ಮೊದಲ ಮಲಯಾಳಂ ಸಿನಿಮಾ 'ಕಾಯಂಕುಲಮ್ ಕುಚುನ್ನಿ' 19ನೇ ಶತಮಾನದ ಕಥಾವಸ್ತು. ಆ್ಯಂಡ್ರೂ ನಿರ್ದೇಶನದ ಈ ಚಿತ್ರ 2018 ನವೆಂಬರ್ನಲ್ಲಿ ಬಿಡುಗಡೆ ಆಗಿದೆ. ಇದರ ಜೊತೆಗೆ ಒಂದು ತಮಿಳು ಸಿನಿಮಾ 'ಉತ್ತರವು ಮಹಾರಾಜ' ಚಿತ್ರದಲ್ಲಿ ಅವರು ಅಭಿನಯಿಸಿದ್ದು 2019 ನವೆಂಬರ್ನಲ್ಲಿ ಬಿಡುಗಡೆ ಆಗಿದೆ.
ಸದ್ಯಕ್ಕೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಜೊತೆ ಪ್ರಿಯಾಂಕ 'ಶುಗರ್ಲೆಸ್' ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಚಿತ್ರವನ್ನು ಶಶಿಧರ್ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಶಶಿಧರ್, ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ್ದು ಭಾರೀ ಕುತೂಹಲ ಕೆರಳಿಸಿದೆ.