ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್ವುಡ್ನಲ್ಲಿ ನಡೆಯುತ್ತಲೇ ಇರ್ತಾವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ಕೊಡುವ ಕೆಲಸ ನಡೆಯುತ್ತಿದೆ. ಇದೀಗ ಅಂಥದ್ದೇ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದು ಚಂದನವನದಲ್ಲಿ ಸಿದ್ಧವಾಗಿದೆ. ಆ ಚಿತ್ರದ ಹೆಸರು ಫ್ಯಾಂಟಸಿ.
ಕಿರುತೆರೆ ಮತ್ತು ಬಿಗ್ಬಾಸ್ ಮೂಲಕ ಮನೆಮಾತಾಗಿರುವ ನಟಿ ಪ್ರಿಯಾಂಕಾ ಈ ಸಿನಿಮಾ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ಮಿಂಚೋದಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರದಲ್ಲೂ ಪ್ರಿಯಾಂಕಾ, ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 3ರಲ್ಲಿ ಅಂತಿಮ ಹಂತ ತಲುಪಿದ್ದ ಸ್ಪರ್ಧಿ ಅನುರಾಗ್ ಫ್ಯಾಂಟಸಿ ಸಿನಿಮಾದ ಕೇಂದ್ರ ಬಿಂದು. ಈ ಚಿತ್ರದಲ್ಲಿ ಆತನ ಮಾನಸಿಕ ಸ್ಥಿತಿಗತಿ ಹೇಗೆಲ್ಲ ಬದಲಾಗುತ್ತದೆ. ಅದರಿಂದ ಎದುರಾಗುವ ಅನಾಹುತಗಳೇನು ಎಂಬುದೇ ಫ್ಯಾಂಟಸಿ ಚಿತ್ರದ ತಿರುಳು.
ಇನ್ನುಳಿದಂತೆ ಮೈಸೂರು ಬಾಲ, ಹರಿಣಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ 99 ಚಿತ್ರದಲ್ಲಿ ಯಂಗರ್ ಗಣೇಶ್ ಪಾತ್ರ ಮಾಡಿದ್ದ ಹೇಮಂತ್ ಮುಖ್ಯಭೂಮಿಕೆಯಲ್ಲಿದ್ದಾರೆ. ಪವನ್ ಡ್ರೀಮ್ ಫಿಲ್ಮ್ ಲಾಂಛನದಲ್ಲಿ ಸಿದ್ಧವಾಗಿರುವ ಫ್ಯಾಂಟಸಿ ಚಿತ್ರಕ್ಕೆ ಪವನ್ ಕುಮಾರ್ ಆರ್, ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ಸಂಹಾರ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದ ಪವನ್, ಬಳಿಕ ಅಮ್ಮ ಐ ಲವ್ ಯೂ, ಆದ್ಯಾ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಈಗ ಫ್ಯಾಂಟಸಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.
ಈ ಶೀರ್ಷಿಕೆಗೆ ತಕ್ಕಂತೆ ಭ್ರಮೆ ಮತ್ತು ವಾಸ್ತವದ ನಡುವೆ ಇಡೀ ಕಥೆ ತೆರೆದುಕೊಳ್ಳಲಿದ್ದು, ರೋಚಕ ಟ್ವಿಸ್ಟ್ಗಳು ಕುತೂಹಲ ಮೂಡಿಸುತ್ತ ಸಾಗಲಿದೆ. ಸದ್ಯ ಎಡಿಟಿಂಗ್ ಟೇಬಲ್ನಲ್ಲಿರೋ ಫ್ಯಾಂಟಸಿ ಚಿತ್ರ, ಪವನ್ ಡ್ರೀಮ್ ಫಿಲ್ಮ್ ಯೂಟ್ಯೂಬ್ ಚಾನೆಲ್ನಲ್ಲಿ ಟೀಸರ್ ಬಿಡುಗಡೆ ಮಾಡೋದಿಕ್ಕೆ ನಿರ್ದೇಶಕರು ಪ್ಲಾನ್ ಮಾಡಿದ್ದಾರೆ.
ಇಡೀ ಸಿನಿಮಾ ಬೆಂಗಳೂರು ಸುತ್ತ ಮುತ್ತ 23 ದಿನಗಳ ಕಾಲ ಚಿತ್ರೀಕರಣವಾಗಿದ್ದು, ಮಡಿಕೇರಿಯಲ್ಲಿ 3 ದಿನ ಬೆಂಗಳೂರಿನಲ್ಲಿ ಒಂದು ದಿನದ ಚಿತ್ರೀಕರಣ ಬಾಕಿ ಇದೆ.
ತಾಂತ್ರಿಕ ವರ್ಗದಲ್ಲಿಯೂ ನುರಿತ ತಂತ್ರಜ್ಞರು, ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ. ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ಆರ್ ಎಸ್. ಗಣೇಶ್ ನಾರಾಯಣ್ ಮತ್ತು ಶಶಿರಾಮ್ ಸಂಕಲವಿರುವ ಫ್ಯಾಂಟಸಿ ಸದ್ಯ ಟೀಸರ್ ನಿಂದ ಗಮನ ಸೆಳೆಯುತ್ತಿದೆ.