ಮೈಸೂರು: ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಚಿತ್ರಮಂದಿರ ಓಪನ್ ಮಾಡುವುದಿಲ್ಲವೆಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳಿ ಅಧ್ಯಕ್ಷ ಆರ್.ಆರ್.ಓದುಗೌಡರ್ ಹೇಳಿದರು.
ಸರ್ಕಾರ ನಮ್ಮ ಜೊತೆ ಚರ್ಚೆ ಮಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ಅಲ್ಲಿಯವರೆಗೂ ನಾವು ಚಿತ್ರಮಂದಿರ ಓಪನ್ ಮಾಡೋದಿಲ್ಲ. ಲಾಕ್ಡೌನ್ನಿಂದ ಥಿಯೇಟರ್ ಉದ್ಯಮಕ್ಕೆ ಸುಮಾರು 15 ಸಾವಿರ ಕೋಟಿ ರೂ ನಷ್ಟವಾಗಿದೆ. ಸರ್ಕಾರ ಥಿಯೇಟರ್‌ಗಳ ನವೀಕರಣ ಶುಲ್ಕವನ್ನು 5 ಸಾವಿರದಿಂದ ಒಂದು ಲಕ್ಷದ 25 ಸಾವಿರಕ್ಕೇರಿಸಿದೆ. ಇದರಿಂದ ಎಲ್ಲಾ ಚಿತ್ರ ಪ್ರದರ್ಶಕ ಮಾಲೀಕರಿಗೂ ತೊಂದರೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮಗೆ ಲೈಸೆನ್ಸ್ ನವೀಕರಣ ಆಗೋದು ಐದು ವರ್ಷಕ್ಕೊಮ್ಮೆ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ. ಇದರ ಬಗ್ಗೆ ನಾವು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಒಂದೊಂದು ರೀತಿಯಲ್ಲಿ ಶುಲ್ಕ ಇದೆ ಎಂದರು.
ಮೈಸೂರಿನವರು ಈಗಾಗಲೇ ಈ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಈ ಬಗ್ಗೆ ಯಾವುದೇ ತೀರ್ಪು ಬಂದಿಲ್ಲ. ನಾವು ಚಿತ್ರ ಮಂದಿರಗಳನ್ನು ಬಂದ್ ಮಾಡಿದ್ರೆ ನಿರ್ಮಾಪಕರಿಗೆ ತೊಂದರೆಯಾಗಲಿದೆ ಎಂದು ಹೇಳಿದರು.
ನಾವು ಸಿಂಗಲ್ ಸ್ಕ್ರೀನ್ನವರು. ನಮ್ಮಿಂದಲೇ ನಿರ್ಮಾಪಕರಿಗೆ ಹೆಚ್ಚು ಹಣ ಬರುವುದು. ಸಿಂಗಲ್ ಸ್ಕ್ರೀನ್ ಬಿಟ್ಟರೆ ಬೇರೆ ಯಾವುದರಿಂದಲೂ ಹೆಚ್ಚು ಹಣ ಬರುವುದಿಲ್ಲ. ಮಲ್ಟಿಫ್ಲೆಕ್ಸ್ಗಳಿಗೆ ಜನಸಾಮಾನ್ಯರು ಹೋಗಲ್ಲ.
ಸಾಮಾನ್ಯ ಜನರು ಥಿಯೇಟರ್ಗಳಿಗೆ ಬರುತ್ತಾರೆ. ಹಾಗಾಗಿ ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಬೇಕು. ನಮ್ಮ ಬೇಡಿಕೆಗೆ ಸರ್ಕಾರ ಒಪ್ಪಿದರೆ ಮಾತ್ರ ನಾವು ಚಿತ್ರಮಂದಿರ ಓಪನ್ ಮಾಡುತ್ತೇವೆ ಎಂದು ಮನವಿ ಮಾಡಿದರು.