ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ ಕಡೆ ತಿರುಗಿನೋಡುವಂತೆ ಮಾಡಿದ ಚಿತ್ರ 'ಓಂ'. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ಪ್ರೇಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಚಿತ್ರ ಇತ್ತಿಚೆಗಷ್ಟೇ 25 ವರ್ಷಗಳ ವಾರ್ಷಿಕೋತ್ಸವ ಆಚರಿಸಿಕೊಂಡಿತು.
ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾದರೂ ಇಂದಿಗೂ ಈ ಸಿನಿಮಾ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಈ ಚಿತ್ರದ ಹಾಡುಗಳು. ಡೈಲಾಗ್ಗಳು ಇಂದಿಗೂ ಬಹಳ ಫೇಮಸ್. ಹಾಡಿನ ನಡುವೆ ಬರುವ ಐ ಲವ್ ಯು, ಯು ಮಸ್ಟ್ ಲವ್ ಮಿ ಎಂಬ ಡೈಲಾಗ್ ಹುಡುಗರ ಮೋಸ್ಟ್ ಫೇವರೆಟ್. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಈ ಡೈಲಾಗ್ ಹೇಳುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ 'ಓಂ' ಚಿತ್ರವನ್ನು ನೆನಪಿಸುವ ಸನ್ನಿವೇಶ ಇದೆ. ಐ ಲವ್ ಯು , ಯು ಮಸ್ಟ್ ಲವ್ ಮಿ ಎಂದು ಪುನೀತ್ ರಾಜ್ಕುಮಾರ್ ಹಾಡುತ್ತಿದ್ದಾರೆ. ಪುನೀತ್ 'ಯುವರತ್ನ' ಚಿತ್ರದ ಡಬ್ಬಿಂಗ್ನಲ್ಲಿ ಬ್ಯುಸಿ ಆಗಿದ್ದು ನಿರ್ದೇಶಕ ಸಂತೋಷ್ ಆನಂದ್ರಾಮ್ ಪುನೀತ್ ಡಬ್ಬಿಂಗ್ ಮಾಡುತ್ತಿರುವ ವಿಡಿಯೋ ತುಣುಕೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಯುವರತ್ನ' ಚಿತ್ರದಲ್ಲಿ ಈ ಸೀನ್ ಬಹಳ ಮುಖ್ಯವಂತೆ. ತೆರೆ ಮೇಲೆ ಈ ದೃಶ್ಯ ಹೇಗೆ ಬರಲಿದೆ ಎಂಬುದನ್ನು ನೋಡಲು ಪುನೀತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.