ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೆಗಾ ಕುಟುಂಬದಲ್ಲಿ ಈಗಾಗಲೇ ಮದುವೆ ಸಂಭ್ರಮ ಆರಂಭವಾಗಿದ್ದು ಕುಟುಂಬದ ಆಪ್ತರಷ್ಟೇ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. 32 ವರ್ಷಗಳ ಹಿಂದೆ ತನ್ನ ತಾಯಿ ನಿಶ್ಚಿತಾರ್ಥದ ವೇಳೆ ಉಟ್ಟಿದ್ದ ಸೀರೆಯನ್ನು ನಿಹಾರಿಕಾ ತಮ್ಮ ಮದುವೆ ಶಾಸ್ತ್ರದಲ್ಲಿ ಉಟ್ಟಿದ್ದು ಈ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾಗಬಾಬು ಪತ್ನಿ ಪದ್ಮಜಾ ಕೊನಿಡೇಲ ತಮ್ಮ ನಿಶ್ಚಿತಾರ್ಥಕ್ಕೆ ಉಟ್ಟಿದ್ದ ನೀಲಿ ಸೀರೆಯನ್ನು ನಿಹಾರಿಕಾ ತಮ್ಮ ಮದುವೆ ಶಾಸ್ತ್ರಕ್ಕೆ ಉಟ್ಟಿದ್ದಾರೆ. ಚಿನ್ನದ ಬಣ್ಣದ ಅಂಚು ಇರುವ ನೀಲಿ ಬಣ್ಣದ ಸೀರೆಯಲ್ಲಿ ನಿಹಾರಿಕಾ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ಈ ಫೋಟೋ ನೋಡಿ ಜನಸಾಮಾನ್ಯರು ಸೇರಿ ಟಾಲಿವುಡ್ ಸೆಲಬ್ರಿಟಿಗಳು ಕಮೆಂಟ್ ಮಾಡುತ್ತಿದ್ದಾರೆ. ನಾಗಬಾಬು ಕೂಡಾ ತಮ್ಮ ಮಗಳ ಫೋಟೋಗೆ ಕಮೆಂಟ್ ಮಾಡಿದ್ದಾರೆ. "ಈ ಫೋಟೋದಲ್ಲಿ ನನ್ನ ಪತ್ನಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ನನ್ನ ಮಗಳು ನಿಹಾರಿಕಾ ದೇವತೆಯಂತೆ ಕಾಣುತ್ತಿದ್ದಾಳೆ" ಎಂದು ನಾಗಬಾಬು ಮಗಳ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ದೊಡ್ಡಪ್ಪ ಚಿರಂಜೀವಿ ಜೊತೆ ನಿಹಾರಿಕಾ ಸೆಲ್ಫಿ ತೆಗೆಸಿಕೊಳ್ಳುತ್ತಿರುವ ಫೋಟೋವನ್ನು ನಾಗಬಾಬು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಜಸ್ಥಾನದ ಉದಯಪುರದ ಉದಯ್ವಿಲಾಸ್ ಪ್ಯಾಲೇಸ್ನಲ್ಲಿ ಡಿಸೆಂಬರ್ 9 ರಂದು ಚೈತನ್ಯ ಜೊನ್ನಗಡ್ಡ ಅವರೊಂದಿಗೆ ನಿಹಾರಿಕಾ ಸಪ್ತಪದಿ ತುಳಿಯಲಿದ್ದಾರೆ. ಆಗಸ್ಟ್ನಲ್ಲಿ ನಿಹಾರಿಕಾ ನಿಶ್ಚಿತಾರ್ಥ ನೆರವೇರಿತ್ತು.