ಡಾ. ರಾಜ್ಕುಮಾರ್ ಅಭಿನಯದ 'ಮಂತ್ರಾಲಯ ಮಹಾತ್ಮೆ' ಚಿತ್ರಕ್ಕೆ ಕಲರ್ ಟಚ್ ತಂತ್ರಜ್ಞಾನ ಅಳವಡಿಸುವ ಸುದ್ದಿ ಎಲ್ಲರಿಗೂ ತಿಳಿದ ವಿಚಾರ. ಇದೀಗ ಅಣ್ಣಾವ್ರ ಮತ್ತೊಂದು ಚಿತ್ರಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.
1977 ರಲ್ಲಿ ಬಿಡುಗಡೆ ಆದ 'ಭಾಗ್ಯವತರು' ಸಿನಿಮಾ ಇದೀಗ ಹೊಸ ತಂತ್ರಜ್ಞಾನದ ಲೇಪನದೊಂದಿಗೆ ಮರು ಬಿಡುಗಡೆಯಾಗಲು ರೆಡಿಯಾಗಿದೆ. ಈ ಚಿತ್ರದಲ್ಲಿ ಡಾ. ರಾಜ್ಕುಮಾರ್ ಹಾಗೂ ಬಿ. ಸರೋಜಾ ದೇವಿ ಅವರ ಜೋಡಿ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಈ ಸಿನಿಮಾ ಅನೇಕ ಬಾರಿ ಮರು ಬಿಡುಗಡೆಯಾಗಿತ್ತು. ಕಿರುತೆರೆಯಲ್ಲಿ ಕೂಡಾ ಸಾಕಷ್ಟು ಬಾರಿ ಈ ಸಿನಿಮಾ ಪ್ರಸಾರ ಕಂಡಿದೆ.
1974 ರಲ್ಲಿ ತಮಿಳಿನಲ್ಲಿ ತೆರೆ ಕಂಡಿದ್ದ 'ಧೀರ್ಘ ಸುಮಂಗಲಿ' ಚಿತ್ರದ ರೀಮೇಕ್ ಇದಾಗಿದ್ದು ದ್ವಾರಕೀಶ್ ಚಿತ್ರದ ಈ ತಮಿಳು ಸಿನಿಮಾದ ರೀಮೇಕ್ ಹಕ್ಕು ಪಡೆದು 'ಭಾಗ್ಯವಂತರು' ಚಿತ್ರವನ್ನು ನಿರ್ಮಿಸಿತ್ತು. ಇದು ಹೆಚ್.ಆರ್. ಭಾರ್ಗವ ಅವರ ಮೊದಲ ನಿರ್ದೇಶನದ ಸಿನಿಮಾ ಕೂಡಾ. ಇದೀಗ 7.1 ಸೌಂಡ್ ಹಾಗೂ ಇನ್ನಿತರ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಗೆ ತಯಾರಾಗಿದೆ.
ಶ್ರೀ ಮುನೇಶ್ವರ ಫಿಲ್ಮ್ಸ್ ಬ್ಯಾನರ್ನ ಎಂ. ಮುನಿರಾಜು 'ಭಾಗ್ಯವಂತರು' ಚಿತ್ರಕ್ಕೆ ಹೊಸ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಚಿತ್ರದಲ್ಲಿ ಡಾ. ರಾಜ್ಕುಮಾರ್, ಬಿ. ಸರೋಜಾ ದೇವಿ ಅವರೊಂದಿಗೆ ಎಂ.ಎನ್. ಲಕ್ಷ್ಮಿ ದೇವಿ, ಬಾಲಕೃಷ್ಣ, ಅಶೋಕ್, ರಾಮಕೃಷ್ಣ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೀಡಿದ್ದ ಮೂರು ಹಾಡುಗಳು ಇಂದಿಗೂ ಬಹಳ ಫೇಮಸ್. ಡಿ.ವಿ. ರಾಜಾರಾಂ ಛಾಯಾಗ್ರಹಣ ಮಾಡಿದ್ದ ಚಿತ್ರಕ್ಕೆ ಬಾಲ್ ಜಿ. ಯಾದವ್ ಸಂಕಲನ ಒದಗಿಸಿದ್ದರು.