ಗೋಲ್ಡನ್ ಸ್ಟಾರ್ ಗಣೇಶ್ ಎರಡನೇ ತಮ್ಮ ಸೂರಜ್ ಕೃಷ್ಣ ಅಭಿನಯದ ಪಕ್ಕಾ ಹಳ್ಳಿ ಸೊಗಡಿನ ಚಿತ್ರ 'ನಾನೇ ರಾಜಾ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ.ಆರ್.ಜೈರಾಜ್, ಮಾಜಿ ಅಧ್ಯಕ್ಷ ಚಿನ್ನೇಗೌಡ್ರು ಹಾಗೂ ಚೇಂಬರ್ ಪದಾಧಿಕಾರಿಗಳು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
'ನಾನೇ ರಾಜಾ' ಮಂಡ್ಯ ಸೊಗಡಿನ ಚಿತ್ರವಾಗಿದ್ದು, ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಭಾರ್ಗವ ಅವರ ಶಿಷ್ಯ ಶ್ರೀನಿವಾಸ್ ಶಿವಾರ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ಸೂರಜ್, 'ನನ್ನ ಅಣ್ಣನ ಸಹಕಾರದಿಂದಲೇ ನಾನು ಹೀರೋ ಆಗಿದ್ದು. ಈ ಚಿತ್ರದ ಬಗ್ಗೆ ಬಹಳ ಕನಸು ಕಟ್ಟಿಕೊಂಡಿದ್ದೇನೆ. ಚಿತ್ರದ ಆಡಿಯೋ ಬಿಡುಗಡೆ ಆಗಿರುವುದು ಬಹಳ ಸಂತೋಷವಾಗಿದೆ. ನನ್ನ ಚಿತ್ರದ ಟೀಸರ್ ರಿಲೀಸ್ ಆದಾಗಿನಿಂದಲೂ ಚಿತ್ರಕ್ಕೆ ಎಲ್ಲರ ಬೆಂಬಲ ಸಿಕ್ಕಿದೆ. ಅದೇ ರೀತಿ ಸಿನಿಮಾ ಮೇಲೂ ನಿಮ್ಮ ಪ್ರೀತಿ ತೋರಿಸಿ ಎಂದು ಮನವಿ ಮಾಡಿದರು.
ಚಿತ್ರದಲ್ಲಿ ಮೂರು ಹಾಡುಗಳಿದ್ದು ಹಳ್ಳಿಯ ವಾತಾವರಣಕ್ಕೆ ತಕ್ಕಂತೆ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಸರಿಗಮಪ ರಿಯಾಲಿಟಿ ಶೋನಲ್ಲಿ ಹಾಡಿರುವ ಗಾಯಕರಿಂದ ಈ ಚಿತ್ರದ ಹಾಡುಗಳನ್ನು ಹಾಡಿಸಿರುವುದಾಗಿ ನಿರ್ದೇಶಕ ಶ್ರೀನಿವಾಸ್ ಹೇಳಿದರು. ಚಿತ್ರದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಕೀರವಾಣಿ ಅವರ ಶಿಷ್ಯ ಮಹೇಂದ್ರನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸೂರಜ್ಗೆ ನಾಯಕಿ ಆಗಿ ಸೋನಿಕ ಗೌಡ ನಟಿಸಿದ್ದಾರೆ. ವರಪ್ರದ ಪ್ರೊಡಕ್ಷನ್ ಬ್ಯಾನರ್ ಅಡಿ ಎಲ್. ಆನಂದ್ ಈ ಸಿನಿಮಾ ನಿರ್ಮಿಸಿದ್ದು, ನವೆಂಬರ್ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.