ಸೃಜನಶೀಲ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈಗ ಸಿನಿಮಾ ವ್ಯಾಪಾರದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಹೌದು, ಹೆಸರಾಂತ ನಿರ್ದೇಶಕ, ಬರಹಗಾರ, ಟೆಂಟ್ ಸಿನಿಮಾ ಹೌಸ್ ನಾಗತಿಹಳ್ಳಿ ಚಂದ್ರಶೇಖರ್ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾದ ಕಥೆಯನ್ನು ಮಗಳಿಂದ ಪಡೆದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೆ ಸುಮಾರು 50ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಹಣ ಹೂಡಿದ್ದಾರೆ. ಅವರೆಲ್ಲ ನಾಗತಿಹಳ್ಳಿ ಚಂದ್ರಶೇಖರ್ ಮೇಲೆ ಹೆಚ್ಚು ಗೌರವ ಇಟ್ಟಿರುವುದರಿಂದ ಈ ಬಾರಿ ಸಿನಿಮಾವನ್ನು ಸ್ವತಃ ನಾಗತಿಹಳ್ಳಿ ವಿಶ್ವದಾದ್ಯಂತ ವಿತರಣೆ ಮಾಡುತ್ತಿದ್ದಾರೆ.
ನಿರ್ದೇಶಕ ತನ್ನ ಮಗುವನ್ನು ಬೇರೆಯವರ ಕೈಗೆ ಇಡುವುದರ ಬದಲು ತಾನೇ ಪ್ರೇಕ್ಷಕರವರೆಗೂ ತೆಗೆದುಕೊಂಡು ಹೋಗುವುದು ಈಗ ಅನಿವಾರ್ಯ ಪರಿಸ್ಥಿತಿ ಇದೆ ಅಂತ ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಳ್ಳುತ್ತಾರೆ.
ಇದೀಗ ಇಂಡಿಯಾ ವರ್ಸೆಸ್ ಇಂಗ್ಲೆಂಡ್ ಸಿನಿಮಾವನ್ನು ಜನವರಿ 24ರಂದು ಬಿಡುಗಡೆ ಮಾಡುಲು ನಿರ್ಧರಿಸಲಾಗಿದೆ. ಇನ್ನು ಈ ಸಿನಿಮಾವನ್ನು ಏಕಕಾಲದಲ್ಲಿ ಭಾರತ ಹಾಗೂ ಇತರ ರಾಷ್ಟ್ರಗಳಲ್ಲಿಯೂ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಅಮೆರಿಕ, ಕೆನಡ, ಸೌತ್ ಆಫ್ರಿಕಾ, ನೈಜೀರಿಯ, ಅರಬ್ ರಾಷ್ಟ್ರ, ಆಸ್ಟ್ರೇಲಿಯ, ಸಿಂಗಪೂರ್, ಹಾಂಗ್ಕಾಂಗ್, ಯುರೋಪ್ಗಳಲ್ಲಿ ಬಿಡುಗಡೆಗೆ ಸ್ಯಾಂಡಲ್ವುಡ್ ಗೆಳೆಯರ ಬಳಗ ಮುಂದಾಗಿದೆ.
30 ವರ್ಷಗಳ ಹಿಂದೆ 12 ಲಕ್ಷದಲ್ಲಿ ‘ಉಂಡುಹೋದ ಕೊಂಡು ಹೋದ’ ಸಿನಿಮಾ ನಿರ್ದೇಶನ ಮಾಡಿದ್ದನ್ನು ನೆನಪಿಸಿಕೊಂಡ ನಾಗತಿಹಳ್ಳಿ, ಇಂದು ಪಾರದರ್ಶಕವಾಗಿ, ಕಾರ್ಪೋರೇಟ್ ಶೈಲಿಯಲ್ಲಿ ಸಿನಿಮಾ ಮಾಡಿದರೆ ಸರಿಯಾದ ಪ್ರತಿಕ್ರಿಯೆ ಸಿಗುತ್ತದೆ ಎಂದಿದ್ದಾರೆ.