ಕೊರೊನಾದಿಂದ ಮನರಂಜನಾ ಕ್ಷೇತ್ರದ ಬಹಳಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕುಗ್ಗಿ ಹೋಗಿರುವ ಈ ಕ್ಷೇತ್ರ ಯಾವಾಗ ಸುಧಾರಿಸಿಕೊಳ್ಳುವುದೋ ಯಾರಿಗೂ ಗೊತ್ತಿಲ್ಲ. ಸರ್ಕಾರ ಹಂತ ಹಂತವಾಗಿ ಲಾಕ್ಡೌನ್ ತೆರವುಗೊಳಿಸುತ್ತಿದ್ದು ಜನರು ಕೂಡಾ ಮತ್ತೆ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ದುಡಿಯಲು ಆರಂಭಿಸಿದ್ದಾರೆ.
ಉಳ್ಳವರು ಇಲ್ಲದವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ತಮಿಳುನಾಡಿನ ಸಿನಿಮಾ ಸಂಗೀತ ಕಲಾವಿದರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ ಹಾಗೂ ಎ.ಆರ್. ರೆಹಮಾನ್ ಸಹಾಯ ಮಾಡಿದ್ದಾರೆ. ಸಾವಿರಾರು ವ್ಯಕ್ತಿಗಳ ಕುಟುಂಬ ನಿರ್ವಹಣೆಗೆ ತಲಾ 10 ಲಕ್ಷ ರೂಪಾಯಿ ಹಣ ಸಹಾಯ ಮಾಡಿದ್ದಾರೆ. ಇವರೊಂದಿಗೆ ಇತರ ಸಂಗೀತ ನಿರ್ದೇಶಕರಾದ ಡಿ. ಇಮಾನ್, ಅನಿರುಧ್, ಹಿಪ್ ಹಾಪ್ ತಮಿಳ ಎಂದೇ ಹೆಸರಾದ ಆದಿತ್ಯ ಹಾಗೂ ಜೀವ, ಸಂಗೀತ ಕಲಾವಿದರಿಗೆ 3 ಲಕ್ಷ ರೂಪಾಯಿ, ತಮನ್ 1 ಲಕ್ಷ, ವಿಜಯ್ ಆಂಟೋನಿ, ಘಿಬ್ರನ್ ತಲಾ 50 ಸಾವಿರ ರೂಪಾಯಿ ಹಣವನ್ನು ಮ್ಯೂಸಿಷಿಯನ್ ಅಸೋಸಿಯೇಷನ್ ಅಧ್ಯಕ್ಷ ದಿನಾ ಅವರಿಗೆ ನೀಡಿದ್ದಾರೆ.

ಇವರೆಲ್ಲರಿಂದ ಸಂಗ್ರಹವಾದ ಒಟ್ಟು ಹಣವನ್ನು ಕಷ್ಟದಲ್ಲಿರುವ ವಾದ್ಯಗಾರರಿಗೆ ಹಾಗೂ ಸಂಗೀತ ಕ್ಷೇತ್ರದ ಇತರ ಕಲಾವಿದರಿಗೆ ತಲಾ 2000 ರೂಪಾಯಿಯಂತೆ ಹಂಚಲಾಗುವುದು ಎಂದು ಮ್ಯೂಸಿಷಿಯನ್ ಅಸೋಸಿಯೇಷನ್ ಅಧ್ಯಕ್ಷ ದಿನಾ ಹೇಳಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಕೂಡಾ ಇದೇ ರೀತಿಯ ಸಹಾಯಹಸ್ತ ದೊರೆತರೆ ಕಲಾವಿದರು ಸುಧಾರಿಸಿಕೊಳ್ಳಬಹುದು.