ಅಮ್ಮಾ ಅನ್ನುವ ಪದಕ್ಕೆ ಬೆಲೆ ಕಟ್ಟಲಸಾಧ್ಯ. ಅಮ್ಮಾ ಇಲ್ಲದೇ ಏನು ಇಲ್ಲ, ನಾನಿಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ, ಜೀವನದಲ್ಲಿ ನಾನು ಏನನ್ನಾದರೂ ಸಾಧಿಸಿದ್ದೇನೆ ಎಂದರೆ ಅದಕ್ಕೆ ಆಕೆ ನೀಡಿದ ಪ್ರೀತಿ ವಿಶ್ವಾಸ ನಂಬಿಕೆಯೇ ಕಾರಣ ಎನ್ನುತ್ತಾರೆ ರಾಧಾ ಕಲ್ಯಾಣ ಬೆಡಗಿ ರಾಧಿಕಾ ರಾವ್.
ನನ್ನ ಅಮ್ಮ ವೃತ್ತಿಯಲ್ಲಿ ಟೀಚರ್. ಅಮ್ಮನಾಗಿ ಅವರು ನನ್ನನ್ನು ಅದೆಷ್ಟು ಚೆನ್ನಾಗಿ ಬೆಳೆಸಿದರೋ, ಅಷ್ಟೇ ಚೆನ್ನಾಗಿ ಟೀಚರ್ ಆಗಿ ಉಳಿದ ಮಕ್ಕಳನ್ನು ಕೂಡಾ ಬೆಳೆಸಿದ್ದಾರೆ. ಮಕ್ಕಳಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸುವಂತೆ ಅವರು ಪ್ರೇರೇಪಿಸಿದ್ದಾರೆ. ಕೇವಲ ಪುಸ್ತಕದಲ್ಲಿರುವ ಪಾಠವನ್ನು ಮಾತ್ರ ಹೇಳಿಕೊಡದೆ ಜೀವನಕ್ಕೆ ಅಗತ್ಯವಿರುವಂತಹ ಪಾಠಗಳನ್ನು ಹೇಳಿ ಕೊಟ್ಟಿದ್ದಾರೆ. ಇಂದು ಅಮ್ಮನ ಬಳಿ ಕಲಿತಂತಹ ಎಷ್ಟೋ ಜನ ಹಳೆ ವಿದ್ಯಾರ್ಥಿಗಳು ಬಂದ ಅಮ್ಮನ ಗುಣಗಾನ ಮಾಡುವಾಗ ಸಂತಸವಾಗುತ್ತದೆ ಎನ್ನುತ್ತಾರೆ ಶ್ವೇತಾ ಪ್ರಸಾದ್.
ಅಮ್ಮನ ದಿನ ಕೇವಲ ಒಂದು ದಿನ ಮಾತ್ರ ಆಚರಣೆ ಮಾಡುವಂಥದ್ದಲ್ಲ. ಪ್ರತಿ ದಿನವೂ ಕೂಡಾ ಅಮ್ಮನ ದಿನವೇ. ಆಕೆಯ ಪ್ರೀತಿಯ ಮುಂದೆ ಯಾರ ಪ್ರೀತಿಯೂ ಇಲ್ಲ. ಹೆಣ್ಣು ಮಕ್ಕಳಿಂಗಂತೂ ಅಮ್ಮನ ಜೊತೆ ಅಟ್ಯಾಚ್‌ಮೆಂಟ್ ಸ್ವಲ್ಪ ಜಾಸ್ತಿನೇ. ನಾನೂ ಅಷ್ಟೇ, ಮದುವೆಗೆ ಮೊದಲು ಅಮ್ಮನ ಜೊತೆ ಅಷ್ಟೊಂದು ಅಟ್ಯಾಚ್‌ಮೆಂಟ್ ಇರ್ಲಿಲ್ಲ. ಆದರೆ ಮದುವೆ ಆದ ಮೇಲೆ ಒಂದು ರಾತ್ರಿ ಪೂರ್ತಿ ಅಮ್ಮ ಬೇಕು ಅಂಥ ಅತ್ತಿದ್ದೆ.
ಮದುವೆ ಆದ ಮೇಲೇನೇ ನಂಗೆ ಅಮ್ಮನ ಬೆಲೆ ಗೊತ್ತಾಗಿದ್ದು. ಪ್ರತಿದಿನ ಅಮ್ಮ ಎಷ್ಟೇ ಬ್ಯುಸಿಯಾಗಿದ್ರೂ ನಂಗೆ ಕಾಲ್ ಮಾಡೋದು ಮಿಸ್ ಮಾಡೋದಿಲ್ಲ. ಅಂದ ಹಾಗೆ, ನಂಗೀಗ ಇಬ್ರೂ ಅಮ್ಮ. ನನ್ ಅತ್ತೆ ಕೂಡಾ ಅಷ್ಟೇ, ಅಮ್ಮನ ಹಾಗೇನೇ ಪ್ರೀತಿ ಮಾಡ್ತಾರೆ, ಹರಟೆ ಹೊಡೀತಾರೆ, ಸ್ವಂತ ಮಗಳ ಹಾಗೇ ನೋಡ್ಕೋತಾರೆ. ಇವರಿಬ್ಬರನ್ನು ನನ್ನ ಜೀವನದಲ್ಲಿ ಪಡೆಯೋದಕ್ಕೆ ನಾನು ಪುಣ್ಯ ಮಾಡಿದ್ದೆ ಎನ್ನುತ್ತಾರೆ ಕಸ್ತೂರಿ ನಿವಾಸದ ವರ್ಷಿತಾ ಸೇನಿ.
ನನ್ನ ಜೀವನದ ಪ್ರತಿ ಹಂತದಲ್ಲಿಯೂ ಅಮ್ಮ ಸಪೋರ್ಟ್ ಮಾಡಿದ್ದಾರೆ. ಆಡಿಶನ್, ಶೂಟಿಂಗ್ ಹೀಗೆ ಎಲ್ಲದಕ್ಕೂ ನನ್ನ ಅಮ್ಮ ಜೊತೆಯಲ್ಲಿ ಬರುತ್ತಿದ್ದಾರೆ. ನಾನಿಂದು ಬಣ್ಣದ ಲೋಕದಲ್ಲಿ ಹೆಸರು ಗಳಿಸಿದ್ದೇನೆ ಎಂದರೆ ಅದಕ್ಕೆ ಅಮ್ಮನೇ ಕಾರಣ. ತಾಯಿ ದೇವರು ಅನ್ನೋದು ಸುಳ್ಳಲ್ಲ, ಅದುವೇ ಸತ್ಯ ಎನ್ನುತ್ತಾರೆ ಪಾರು ಧಾರಾವಾಹಿಯ ಅನುಷ್ಕಾ ಪಾತ್ರಧಾರಿ ಮಾನ್ಸಿ ಜೋಷಿ.
ಅಮ್ಮನ ಬಗ್ಗೆ ಒಂದೆರೆಡು ವಾಕ್ಯದಲ್ಲಿ ಹೇಳೋದು ನಿಜಕ್ಕೂ ಕಷ್ಟ. ನಾನು ಇಂದು ಅಮ್ಮನ ತುಂಬಾ ಮಿಸ್ ಮಾಡ್ತಾ ಇದ್ದೇನೆ. ಇತ್ತೀಚೆಗಷ್ಟೇ ನನ್ನ ಮದುವೆ ಆಗಿದ್ದು ಗಂಡನ ಮನೆಯಲ್ಲಿ ಇದ್ದೇನೆ. ಲಾಕ್ ಡೌನ್ನಿಂದಾಗಿ ಅಮ್ಮನ ಮನೆಗೆ ಹೋಗೋದಕ್ಕೆ ಆಗ್ತಿಲ್ಲ. ನನಗೂ ಅಕ್ಕನಿಗೂ ಅಮ್ಮ ಅಂದ್ರೆ ಆಯ್ತು. ಅಪ್ಪ ತೀರಿ ಹೋಗಿ ಹನ್ನೊಂದು ವರ್ಷ ಆಗ್ತಾ ಬಂತು. ಈ ಹನ್ನೊಂದು ವರ್ಷದಿಂದ ಅಮ್ಮನೇ ತುಂಬಾ ಕಷ್ಟಪಟ್ಟು ನಮ್ಮನ್ನ ಸಾಕಿದ್ದಾರೆ. ಏನು ಕೊರತೆ ಇಲ್ಲದೇ ಬೆಳಿಸಿದ್ದಾರೆ ಎಂದು ಅಮ್ಮನ ಬಗ್ಗೆ ಹೇಳುತ್ತಾರೆ ಮಂಗಳ ಗೌರಿ ಮದುವೆಯ ಸೌಂದರ್ಯ ಪಾತ್ರಧಾರಿ ರಾಧಿಕಾ ಮಿಂಚು.