ಮೆಗಾಸ್ಟಾರ್ ಎಂದೇ ಖ್ಯಾತರಾದ ನಟ ಕೊನಿಡೇಲ ಚಿರಂಜೀವಿಗೆ ಇಂದು 64ನೇ ಜನ್ಮದಿನದ ಸಂಭ್ರಮ. ಟಾಲಿವುಡ್ನಲ್ಲಿ ತಮ್ಮದೇ ಆದ ಸ್ಟೈಲ್, ಮ್ಯಾನರಿಸಂನಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ ಚಿರುಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಸ್ನೇಹಿತರು ಜನ್ಮದಿನದ ಶುಭ ಕೋರಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರು ಎಂಬ ಪುಟ್ಟ ಹಳ್ಳಿಯಲ್ಲಿ 1955 ಆಗಸ್ಟ್ 22 ರಂದು ಕೊನಿಡೇಲ ವೆಂಕಟ್ರಾವ್ ಹಾಗೂ ಅಂಜನಾದೇವಿ ದಂಪತಿಗೆ ಮೊದಲ ಮಗನಾಗಿ ಚಿರಂಜೀವಿ ಜನಿಸಿದರು. ಚಿರು ಮೊದಲ ಹೆಸರು ಕೊನಿಡೇಲ ಶಿವಶಂಕರ್ ವರಪ್ರಸಾದ್. ಚಿಕ್ಕಂದಿನಿಂದ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಚಿರು ಪದವಿ ನಂತರ ಚೆನ್ನೈಗೆ ತೆರಳಿ ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್ಗೆ ಸೇರಿದರು. 1978ರಲ್ಲಿ ಚಿರು 'ಪುನಾದಿರಲ್ಲು' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದರು. ಆದರೆ, ಬಿಡುಗಡೆಯಾದ ಮೊದಲ ಚಿತ್ರ 'ಪ್ರಾಣಂ ಖರೀದು'. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರಂಜೀವಿಗೆ ಬ್ರೇಕ್ ಕೊಟ್ಟಿದ್ದು ಕೋಡಿ ರಾಮಕೃಷ್ಣ ನಿರ್ದೇಶನದ 'ಇಂಟ್ಲೋ ರಾಮಯ್ಯ ವೀದಿಲೋ ಕೃಷ್ಣಯ್ಯ'. ಅಲ್ಲಿಂದ ಕೊತ್ತಪೇಟ ರೌಡಿ, ಶ್ರೀರಸ್ತು ಶುಭಮಸ್ತು, ಶುಭಲೇಖ, ಪುಲಿ ಬೆಬ್ಬುಲಿ, ಮುಠಾಮೇಸ್ತ್ರಿ, ಅಲ್ಲುಡು ಮಜಾಕ, ಶಂಕರ್ ದಾದಾ ಎಂಬಿಬಿಎಸ್, ಕೈದಿ ನಂ 150 ಸೇರಿ ಒಟ್ಟು 150 ಚಿತ್ರಗಳಲ್ಲಿ ಚಿರಂಜೀವಿ ನಟಿಸಿದ್ದಾರೆ.
1980 ರಲ್ಲಿ ಚಿರಂಜೀವಿ ತೆಲುಗು ಕಾಮಿಡಿ ನಟ ಅಲ್ಲು ರಾಮಲಿಂಗಯ್ಯ ಅವರ ಪುತ್ರಿ ಸುರೇಖ ಅವರನ್ನು ವಿವಾಹವಾದರು. ಚಿರು - ಸುರೇಖ ದಂಪತಿಗೆ ರಾಮ್ಚರಣ್ ತೇಜ, ಸುಷ್ಮಿತ, ಸಿರಿಶ ಸೇರಿ ಮೂವರು ಮಕ್ಕಳು. ಚಿರು ಪುತ್ರ ರಾಮ್ಚರಣ್, ತಮ್ಮಂದಿರಾದ ನಾಗಬಾಬು ಹಾಗೂ ಪವನ್ ಕಲ್ಯಾಣ್ ಕೂಡಾ ಖ್ಯಾತ ನಟರು. ಸದ್ಯಕ್ಕೆ ಚಿರು ತಮ್ಮ 151 ನೇ ಸಿನಿಮಾ 'ಸೈ ರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮೊನ್ನೆಯಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮ್ಮದೇ ಸ್ವಂತ ಬ್ಯಾನರ್ ಕೊನಿಡೇಲ ಪ್ರೊಡಕ್ಷನ್ಸ್ ಅಡಿ ಚಿರು ಸಿನಿಮಾಗಳನ್ನು ಕೂಡಾ ನಿರ್ಮಿಸುತ್ತಿದ್ದಾರೆ.
ಚಿರಂಜೀವಿ, ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲಿ ಕೂಡಾ ಸಕ್ರಿಯರಾಗಿದ್ದರು. 2008ರಲ್ಲಿ ಪ್ರಜಾರಾಜ್ಯಂ ಎಂಬ ಸ್ವಂತ ಪಕ್ಷ ಕಟ್ಟಿದ ಚಿರು, 2009ರಲ್ಲಿ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಿ ತಿರುಪತಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2011 ರಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳಿಸಿದರು. 2012 ರಲ್ಲಿ ಚಿರಂಜೀವಿ ರಾಜ್ಯಸಭೆ ಸದಸ್ಯರಾಗಿ ಕೂಡಾ ನೇಮಕವಾದರು. ಅದೇ ವರ್ಷ ಕೇಂದ್ರ ಪ್ರವಾಸೋದ್ಯಮ ಸಚಿವರಾಗಿ ಕೂಡಾ ಮೆಗಾಸ್ಟಾರ್ ಆಯ್ಕೆಯಾದರು. ಆದರೆ 2014 ರ ನಂತರ ರಾಜಕೀಯ ಚಟುವಟಿಕೆಗಳಿಂದ ಕೊಂಚ ದೂರ ಸರಿದಿದ್ದಾರೆ.
1998 ರಲ್ಲಿ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದ ಮೆಗಾಸ್ಟಾರ್ ತಮ್ಮ ಸಂಸ್ಥೆ ಮೂಲಕ ಸಾವಿರಾರು ಜನರಿಗೆ ರಕ್ತದಾನ, ನೇತ್ರದಾನ ಸೇರಿ ಬಹಳಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪದ್ಮಭೂಷಣ, ನಂದಿಪ್ರಶಸ್ತಿ ಸೇರಿ ಚಿರಂಜೀವಿಗೆ ಬಹಳಷ್ಟು ಅವಾರ್ಡ್ಗಳು ಬಂದಿವೆ. ನಿನ್ನೆ ರಾತ್ರಿಯಿಂದಲೇ ಚಿರು ಬರ್ತಡೇ ಸೆಲಬ್ರೇಶನ್ ಆರಂಭವಾಗಿದ್ದು ಅಭಿಮಾನಿಗಳು ಚಿರು ಮನೆ ಮುಂದೆ ಜಮಾಯಿಸಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಕೂಡಾ ಜರುಗುತ್ತಿವೆ.