ಮನಸಾರೆ, ಮನಾಸಲಾಜಿ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಕಮಾಲ್ ಮಾಡಿವೆ. ಇದೀಗ ಹೊಸಬರ ತಂಡವೊಂದು 'ಮನಸಾಗಿದೆ' ಎಂಬ ಶೀರ್ಷಿಕೆಯೊಂದಿಗೆ ಮುದ್ದಾದ ಲವ್ ಸ್ಟೋರಿ ಹೇಳೋಕೆ ಬರ್ತಿದೆ.
ನಿರ್ಮಾಪಕ ಎಸ್ ಚಂದ್ರಶೇಖರ್, ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ, ಯುವನಟ ಅಭಯ್, ನಟಿಯರಾದ ಅಧಿರಾ, ಮೇಘಶ್ರೀ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕಿ ಮಾನಸಾ ಹೊಳ್ಳ ಹಾಗೂ ಗೀತ ರಚನೆಕಾರ ಅರಸು ಅಂತಾರೆ ಇಂದು 'ಮನಸಾಗಿದೆ' ಸಿನಿಮಾದ ವಿಶೇಷತೆ ಹಂಚಿಕೊಂಡರು.
![Manasagide Cinema](https://etvbharatimages.akamaized.net/etvbharat/prod-images/kn-bng-03-hosabhara-cutelove-storyya-manasagide-cinema-7204735_30032021184441_3003f_1617110081_729.jpg)
ಕೆಲವರು ಪ್ರೀತಿನ ಪಡೆಯಲೇಬೇಕು ಅಂತ ಹುಡ್ಕೊಂಡು ಹೋಗ್ತಾರೆ. ಮತ್ತೆ ಕೆಲವರಿಗೆ ಪ್ರೀತಿನೆ ಹುಡುಕಿಕೊಂಡು ಬರುತ್ತೆ. ನಮ್ಮ ಈ ಚಿತ್ರದಲ್ಲಿ ಕಥಾನಾಯಕ ಸಹ ತಾನು ಇಷ್ಟಪಟ್ಟು ಹುಡ್ಕೊಂಡು ಬಂದಂತಹ ಪ್ರೀತಿನ ಪಡಿತಾನಾ? ಅಥವಾ ತಾನು ಬಯಸದೇ ಬಳಿ ಬಂದ ಪ್ರೀತಿ ಪಡಿತಾನಾ? ಎಂಬುದೇ ಕುತೂಹಲ ಮೂಡಿಸಲಿದೆ ಎಂದು ಚಿತ್ರತಂಡ ಹೇಳಿದೆ.
ಈ ಹಿಂದೆ ಬರ್ಥ್ ಎಂಬ ಸಿನಿಮಾವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್ ತಮ್ಮ ಮಗ ಅಭಯ್ಗಾಗಿ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನ ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನ ಮಾಡುತ್ತಿದ್ದಾರೆ. ಅರಸು ಅಂತಾರೆ, ವಿ. ನಾಗೇಂದ್ರ ಪ್ರಸಾದ್, ಹೃದಯ ಶಿವ ಬರೆದಿರುವ ಸಾಹಿತ್ಯಕ್ಕೆ ಮಾನಸಾ ಹೊಳ್ಳ ಸಂಗೀತ ನೀಡಲಿದ್ದಾರೆ.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಸಿನಿಮಾದಲ್ಲಿ ಮೂರು ಆ್ಯಕ್ಷನ್ ಸಿಕ್ವೇನ್ಸ್ಗಳನ್ನ ಕಂಪೋಸ್ ಮಾಡಲಿದ್ದಾರೆ. ಶಂಕರ್ ಛಾಯಾಗ್ರಹಣವಿರುವ ಮನಸಾಗಿದೆ ಸಿನಿಮಾವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ತಾಣಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಓದಿ: ನಾವಿಬ್ಬರೇ ಗುಂಡುಪಾರ್ಟಿ ಸಹಪಾಟಿಗಳು - ಟೈಗರ್ ಪ್ರಭಾಕರ್ರನ್ನು ನೆನೆದ ನವರಸನಾಯಕ