ಕೊರೊನಾ ಸಿನಿಮಾ ಕ್ಷೇತ್ರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈ ಕಾರಣಕ್ಕಾಗಿಯೇ ಈಗ ಸಿನಿಪ್ರಿಯರು ಓಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಸಿನಿಮಾ ನೋಡುವುದನ್ನು ಹೆಚ್ಚು ಮಾಡಿದ್ದಾರೆ.
ಸಿನಿಮಾಗಳನ್ನು ಮನೆಯಲ್ಲಿಯೇ ಕುಳಿತು ಬೇಕೆಂದಾಗ, ಬಿಡುವಿನ ಸಂದರ್ಭದಲ್ಲಿ ನಮ್ಮದೇ ಮೊಬೈಲ್‌ನಲ್ಲಿ ಅಥವಾ ಸ್ಮಾರ್ಟ್ ಟಿ.ವಿಯಲ್ಲಿ ಸಿನಿಮಾ ನೋಡುವ ಸುಲಭೋಪಾಯಗಳನ್ನು ಈ ಓಟಿಟಿ ಪ್ಲಾಟ್ ಫಾರಂಗಳು ಒದಗಿಸುತ್ತಿವೆ.
ಇದೀಗ ಕನ್ನಡದಲ್ಲಿ ಮೂವಿ ಗ್ಯಾರೇಜ್ ಎಂಬ ಹೆಸರಿನ ಓಟಿಟಿ ಪ್ಲಾಟ್ ಫಾರ್ಮ್ ಲಾಂಚ್ ಆಗಿದೆ. ಈ ಓಟಿಟಿಯಲ್ಲಿ ಸಿನಿಮಾ ಅಲ್ಲದೇ,ಯಕ್ಷಗಾನ, ಭರತನಾಟ್ಯ, ನಾಟಕ, ಪಪ್ಪೆಟ್ ಶೋಗಳನ್ನೂ ನೋಡಬಹುದು.
ಸುಜಾತಾ ಕಾಮತ್ ಎಂಬುವರು, ಆರ್ ಪಿ ಕೆ ಇಂಟರ್ಪ್ರೈಸೆಸ್ನ ಈ ಮೂವಿ ಗ್ಯಾರೇಜ್ ಆ್ಯಪ್ ಪರಿಚಯಿಸುತ್ತಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನಿಲ್ ಪುರಾಣಿಕ್, ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜಯರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್, ಹಿರಿಯ ನಿರ್ದೇಶಕರಾದ ದಿನೇಶ್ ಬಾಬೂ, ನುರಿತ ಛಾಯಾಗ್ರಾಹಕರಾದ ಜೆ.ಜೆ.ಕೃಷ್ಣ, ಹಾಗು ಬಾ.ಮ.ಹರೀಶ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ ಅವರು ಈ ಮೂವಿ ಗ್ಯಾರೇಜ್ ಆ್ಯಪ್ ಅನ್ನು ಇತ್ತೀಚೆಗೆ ಅನಾವರಣ ಮಾಡಿದ್ದರು.
ಕನ್ನಡಕ್ಕೆ ಉತ್ತಮವಾದ ಓಟಿಟಿ ಇಲ್ಲ, ಹಾಗೆ ನಿರ್ಮಾಪಕರ ಸಹಕಾರಕ್ಕೆ ಯಾವುದೇ ಡಿಜಿಟಲ್ ವೇದಿಕೆ ಇಲ್ಲ ಎಂಬ ಕೊರಗನ್ನು ಈ ಹೊಸ ತಂಡ ನೀಗಿಸುವುದಾಗಿ ಭರವಸೆ ನೀಡಿದೆ.