ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಮುನಿರತ್ನ ನಿರ್ಮಾಣದ ಬಹುಕೋಟಿ ವೆಚ್ಚದ 'ಕುರುಕ್ಷೇತ್ರ' ಚಿತ್ರ ಹಲವಾರು ಅಡಚಣೆಗಳನ್ನು ಮೆಟ್ಟಿನಿಂತು ಕೊನೆಗೂ ನಾಳೆ ರಿಲೀಸ್ ಆಗ್ತಿದೆ.
ಇನ್ನು ಕುರುಕ್ಷೇತ್ರ ಚಿತ್ರವನ್ನು ವಿಶ್ವದಾದ್ಯಂತ ಸುಮಾರು 3000ಕ್ಕೂ ಹೆಚ್ಚಿನ ಸ್ಕ್ರೀನ್ಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಅಲ್ಲದೆ ನಾಲ್ಕೈದು ದಿನಗಳಿಂದಲೇ ದಚ್ಚು ಅಭಿಮಾನಿಗಳು ದಾಸನ ಕಟೌಟ್ ಗಳನ್ನು ಚಿತ್ರಮಂದಿರಗಳ ಬಳಿ ನಿಲ್ಲಿಸಿ ಅದ್ದೂರಿಯಾಗಿ ಕುರುಕ್ಷೇತ್ರವನ್ನು ಸ್ವಾಗತಿಸಲು ಸಿದ್ದರಾಗಿದ್ರು. ಅದ್ರೆ ದಾಸನ ಭಕ್ತಗಣದ ಆಸೆ ಮಳೆರಾಯ ಮಹಾಮಳೆಯಲ್ಲಿ ಕೊಚ್ಚಿಹೋಗುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಈಗ ಕೇಳಿ ಬರ್ತಿದೆ.
ದರ್ಶನ್ ಸಿನಿಮಾಗಳಂದ್ರೆ ದಚ್ಚುಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಉಂಟಾಗುತ್ತೆ. ಕರ್ನಾಟಕದಾದ್ಯಂತ ದರ್ಶನ್ ಉತ್ಸವದಂತೆ ಸಿನಿಮಾಗಳನ್ನು ಸ್ವಾಗತಿಸುತ್ತಾರೆ. ಅದ್ರೆ ಈಗ ಕುರುಕ್ಷೇತ್ರ ಚಿತ್ರಕ್ಕೆ ದೊಡ್ಡ ಅಡಚಣೆ ಎದುರಾಗಿದೆ.
ದಚ್ಚು ಸಿನಿಮಾವನ್ನು ಮೊದಲ ದಿನವೇ ನೋಡಬೇಕು ಎಂದು ಕಾತರದಿಂದ ಕಾಯುವ ಅಭಿಮಾನಿಗಳಿಗೆ ಮಳೆರಾಯ ಅಡ್ಡಗಾಲು ಹಾಕಿದ್ದಾನೆ. ಉತ್ತರ ಕರ್ನಾಟಕದಲ್ಲಿ ಮಹಾ ಮಳೆಯಾಗ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಲ್ಲದೆ ದರ್ಶನ್ಗೆ ಉತ್ತರ ಕರ್ನಾಟದ ಭಾಗದಲ್ಲಿ ಹೆಚ್ಚುಅಭಿಮಾನಿ ಬಳಗವಿದ್ದು, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ಚಿಕ್ಕೋಡಿ, ಹುಬ್ಬಳಿ-ಧಾರವಾಡ, ಹಾವೇರಿ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ರೌದ್ರಾವತಾರ ಹೆಚ್ಚಾಗಿದ್ದು, ಈ ಜಿಲ್ಲೆಗಳಲ್ಲಿ ದುರ್ಯೋಧನನ "ದರ್ಶನ"ವಾಗೋದೋ ಡೌಟ್ ಎನ್ನಲಾಗ್ತಿದೆ.